ನವದೆಹಲಿ : ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದ ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಸೋಶಿಯಲ್ ಮೀಡಿಯಾದಿಂದ ಹಿಡಿದು ಕೋರ್ಟ್ ಅಂಗಳದರೆಗೂ ಪ್ರಕರಣದ ಕುರಿತು ಚರ್ಚೆ ಆಗ್ತಿದೆ. ಸದ್ಯ ಕೇಸ್ಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅತುಲ್ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬದವರ ವಿಚಾರಣೆ ನಡೆಸಲು ಒಂದು ತಂಡ ಉತ್ತರಪ್ರದೇಶಕ್ಕೆ ತೆರಳಿದೆ.
ಇನ್ನು ಎಲ್ಲೆಡೆ ಜಸ್ಟಿಸ್ ಫಾರ್ ಅತುಲ್ ಅಭಿಯಾನ ನಡೆಯುತ್ತಿರುವ ಹೊತ್ತಲ್ಲೇ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ಅವರು ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ. ಘಟನೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ನಟಿ ಕಂಗನಾ, ಈ ರೀತಿಯ ಪ್ರಕರಣದ ಬಗ್ಗೆ ನಿರಂತರ ಪರಿಶೀಲನೆ ನಡೆಸಬೇಕು. ಇಂತಹ ಪ್ರಕರಣಗಳಲ್ಲಿ ಶೇ.99ರಷ್ಟು ಪುರುಷರು ತಪ್ಪಿತಸ್ಥರು ಅಂತ ಹೇಳಿ ಚರ್ಚೆಗೆ ಕಾರಣರಾಗಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತುಲ್ ಸುಭಾಷ್ ಆತ್ಮಹತ್ಯೆಗೂ ಮುಂಚೆ ಹರಿಬಿಟ್ಟಿರುವ ವಿಡಿಯೋದಲ್ಲಿ ಅವರ ಪತ್ನಿ ಯಾವ ಮಟ್ಟದಲ್ಲಿ ಕಿರುಕುಳ ನೀಡಿದ್ದರೆಂದು ತಿಳಿಯುತ್ತದೆ. ಆತನಿಂದ ಸಾಮರ್ಥ್ಯ ಮೀರಿ ಕೋಟ್ಯಂತರ ಹಣ ವಸೂಲಿ ಮಾಡಲಾಗಿದೆ. ಈ ಆತ್ಮಹತ್ಯೆಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಅವರ ವಿಡಿಯೋ ಹೃದಯ ವಿದ್ರಾವಕವಾಗಿದೆ. ನಕಲಿ ಸ್ತ್ರೀವಾದ ಖಂಡನೀಯ. ಆ ವ್ಯಕ್ತಿ ತೀವ್ರ ಒತ್ತಡಕ್ಕೆ ಒಳಗಾಗಿದ್ದರಿಂದ ಈ ಹೆಜ್ಜೆ ಇಟ್ಟಿದ್ದಾರೆ. ಆದರೆ, ಈ ಮಹಿಳೆಯ ತಪ್ಪಿನ ಉದಾಹರಣೆಯನ್ನು ಇಟ್ಟುಕೊಂಡು ದಿನವೂ ಕಿರುಕುಳಕ್ಕೊಳಗಾಗುವ ಮಹಿಳೆಯರ ಸಂಖ್ಯೆಯನ್ನು ಅಲ್ಲಗಳೆಯುವಂತಿಲ್ಲ. ವೈವಾಹಿಕ ಜೀವನದಲ್ಲಿ ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ. ಹಾಗಾಗಿಯೇ ಇಂತಹ ತಪ್ಪುಗಳು ನಡೆಯುತ್ತವೆ ಎಂದು ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ. ಈ ಹೇಳಿಕೆಗೆ ಹಲವರು ಅಸಮಾಧಾನ ಹೊರಹಾಕಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅತುಲ್ ಸಾವಿನ ನ್ಯಾಯಕ್ಕಾಗಿ ಕೂಗು ಹೆಚ್ಚಾಗಿದ್ದು, ಜಸ್ಟಿಸ್ ಫಾರ್ ಅತುಲ್ ಎಂಬ ಹ್ಯಾಶ್ಟ್ಯಾಗ್ ಬಳಸಿ ನೆಟ್ಟಿಗರು ನ್ಯಾಯ ಕೇಳ್ತಿದ್ದಾರೆ.
ಇದನ್ನೂ ಓದಿ : ಟೆಕ್ಕಿ ಅತುಲ್ ಆತ್ಮಹತ್ಯೆ ಕೇಸ್ನ ತನಿಖೆ ಚುರುಕು – ಪತ್ನಿ, ಫ್ಯಾಮಿಲಿ ವಿಚಾರಣೆಗೆ ಯುಪಿಗೆ ತೆರಳಿದ ಬೆಂಗಳೂರು ಪೊಲೀಸರು..!