ಮಂಡ್ಯ : ಸಂಸದೆ ಸುಮಲತಾ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ತನಗೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್ ಅವರಿಗೆ ನಿರಾಸೆಯಾಗಿತ್ತು. ಹಾಗಾಗಿ ಸುಮಲತಾ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಂಡಿತ್ತು.
ಆದರೆ, ಸುಮಲತಾ ಅವರು ಮೂರು ತಿಂಗಳ ಸಸ್ಪೆನ್ಸ್ಗೆ ನಿನ್ನೆ ಬ್ರೇಕ್ ಹಾಕಿದ್ದಾರೆ. ಸುಮಲತಾ ಅವರು ಮಂಡ್ಯ ಚುನಾವಣೆ ಕಣದಿಂದ ಹಿಂದೆ ಸರಿದು, ಬಿಜೆಪಿಗೆ ಬೆಂಬಲ ನೀಡುವುದಾಗಿ ನಿನ್ನೆ ನಡೆದ ಬೆಂಬಲಿಗರ ಸಭೆಯಲ್ಲಿ ಘೋಷಿಸಿದ್ದು, ಈ ಹಿನ್ನಲೆ ಮಂಡ್ಯ ಸಂಸದೆ ಸುಮಲತಾ ಅವರು ನಾಳೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ನಾಳೆ ಮಧ್ಯಾಹ್ನ 12 ಗಂಟೆಗೆ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುಮಲತಾ ಅವರು ಬಿಜೆಪಿಗೆ ಸೇರಲಿದ್ದಾರೆ. ಸುಮಲತಾ ಜೊತೆಗೆ ಕೆಲ ಬೆಂಬಲಿಗರು ಕೂಡ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ನಿನ್ನೆಯಷ್ಟೇ ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿ, ಮೋದಿಯವರು ಕಳೆದ ಎಲೆಕ್ಷನ್ನಲ್ಲಿ ನನಗಾಗಿ ಮತ ಕೇಳಿದ್ರು. ಇದರ ಜೊತೆಗೆ ಮಂಡ್ಯ ಕ್ಷೇತ್ರಕ್ಕೆ 4 ಸಾವಿರ ಕೋಟಿ ನೀಡಿದ್ದಾರೆ. ಮೋದಿ ಮಹಾನ್ ನಾಯಕ, ಮತ್ತೆ ಪ್ರಧಾನಿಯಾಗಬೇಕು. ಮೋದಿಯವರಿಗಾಗಿ ನಾನು ಬೆಂಬಲ ಕೊಡುವ ನಿರ್ಧಾರ ಮಾಡಿದ್ದೇನೆ. ಇಡೀ ದೇಶ ಚೆನ್ನಾಗಿದ್ರೆ ಮಂಡ್ಯ ಕೂಡ ಚೆನ್ನಾಗಿರುತ್ತೆ ಎಂದು ಸುಮಲತಾ ಹೇಳಿದ್ದರು.
ಇದನ್ನೂ ಓದಿ : ’ಸ್ವಯಂಭು’ ಚಿತ್ರದ ಮೂಲಕ ಕಂಬ್ಯಾಕ್ ಆದ ವಜ್ರಕಾಯ ಬೆಡಗಿ ನಭಾ ನಟೇಶ್..!