ಬೆಂಗಳೂರು : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ನಾಗೇಂದ್ರ ಬೆನ್ನಲ್ಲೇ ಇದೀಗ ಹಗರಣದಲ್ಲಿ ಮತ್ತೊಬ್ಬ ಸಚಿವನ ಹೆಸರು ಕೇಳಿ ಬಂದಿದ್ದು, ಈ ಡೀಲ್ನ ಅಸಲಿ ಅಡ್ಡ ವಿಧಾನಸೌಧನಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಹೌದು, ಅಕ್ರಮದ ಸಾಕ್ಷ್ಯಗಳ ನಾಶಕ್ಕೆ ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಕಚೇರಿಯಲ್ಲೇ ಸಂಚು ನಡೆದಿತ್ತು ಎಂಬ ಮತ್ತೊಂದು ಪ್ರಮುಖ ಆರೋಪ ಬಯಲಾಗಿದೆ. ಪ್ರಕರಣದ ಎಂಟನೇ ಆರೋಪಿಯಾಗಿರುವ ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ.
ಬೆಂಗಳೂರಿನ ಮೂರನೇ ಅಪರ ಮುಖ್ಯ ಮೆಟ್ರೋಪಾಲ್ಟೇನ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ 8ನೇ ಆರೋಪಿ ಪರ ವಕೀಲರು ಈ ಅಫಿಡವಿಟ್ನ್ನು ಗುರುವಾರ ಸಲ್ಲಿಸಿದ್ದಾರೆ. ಸಚಿವರ ಕಚೇರಿಯಲ್ಲಿ ಮೇ 24ರಂದು ಸಭೆ ನಡೆದು, ಅಕ್ರಮದ ಸಾಕ್ಷ್ಯಗಳ ನಾಶ ಕುರಿತು ಚರ್ಚೆಯಾಗಿದೆ. ಮಾ.24ರ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗಿನ ಕಚೇರಿ ಸಿಸಿಟಿವಿ ಫೂಟೇಜ್ಗಳನ್ನು ವಶಪಡಿಸಿಕೊಂಡು ಸಂರಕ್ಷಿಸಲು ತನಿಖಾಧಿಕಾರಿಗೆ ನಿರ್ದೇಶಿಸಬೇಕೆಂದು ಕೋರ್ಟ್ಗೆ ಎಂಟನೇ ಆರೋಪಿ ಮೊರೆಯಿಟ್ಟಿದ್ದಾರೆ. ಈ ಸಭೆಯಲ್ಲಿ ಸಚಿವರಾದ ಶರಣ ಪ್ರಕಾಶ್ ಪಾಟೀಲ, ಬಿ.ನಾಗೇಂದ್ರ, ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ಕೂಡ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
ಈಗಾಗಲೇ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವ-ಇಚ್ಛೆಯಿಂದಲೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ನೀಡುವಂತೆ ಯಾರೂ ನನಗೆ ಒತ್ತಡ ಹಾಕಿಲ್ಲ. ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಾಳೆಯಿಂದ ನಮೋ 3.O ಇನ್ನಿಂಗ್ಸ್ ಶುರು – ರಾಷ್ಟ್ರಪತಿ ಭವನದಲ್ಲಿ ಮೋದಿ ಪಟ್ಟಾಭಿಷೇಕಕ್ಕೆ ಭಾರೀ ಸಿದ್ಧತೆ..!