ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೂರ್ನಿಯ 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಚೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ 171 ಎಸೆತಗಳಲ್ಲಿ ಚೊಚ್ಚಲ ಶತಕ ಪೂರೈಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 474 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಕೇವಲ 3 ರನ್ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ 24 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಆ ಬಳಿಕ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಶತಕದ ಜೊತೆಯಾಟ ಪ್ರದರ್ಶಿಸಿದರು. ಆದರೆ ತಂಡದ ಮೊತ್ತ 153 ರನ್ ಆಗಿದ್ದ ವೇಳೆ ರನ್ ಕದಿಯುವ ಯತ್ನದಲ್ಲಿ ಯಶಸ್ವಿ ಜೈಸ್ವಾಲ್ (82) ರನೌಟ್ ಆಗಿ ಹೊರ ನಡೆದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (36) ಸಹ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಆಕಾಶ್ ದೀಪ್ (0) ಶೂನ್ಯಕ್ಕೆ ಔಟಾದರೆ, ರಿಷಭ್ ಪಂತ್ 28 ರನ್ಗಳಿಸಲಷ್ಟೇ ಶಕ್ತರಾದರು.
ಈ ಹಂತದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯೊಂದಿಗೆ ರನ್ ಗಳಿಸುತ್ತಾ ಸಾಗಿದ ನಿತೀಶ್ 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿಯ ಬಳಿಕ ಆಸೀಸ್ ಬೌಲರ್ಗಳನ್ನು ಕಾಡಿದ ಯುವ ದಾಂಡಿಗ ಟೀಮ್ ಇಂಡಿಯಾ ಮೊತ್ತವನ್ನು 300ರ ಗಡಿದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೆ 150 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಭರ್ಜರಿ ಶತಕ ಸಿಡಿಸಿದರು.
ಆಸೀಸ್‌ನಲ್ಲಿ ಹೊಸ ರೆಕಾರ್ಡ್ ಬರೆದ ನಿತೀಶ್ : ನಿತೀಶ್ ಕುಮಾರ್ ರೆಡ್ಡಿ ಇದೀಗ ಆಸ್ಟ್ರೇಲಿಯಾ ನೆಲದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ 2008ರ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು 87 ರನ್ ಬಾರಿಸಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದೀಗ ನಿತೀಶ್ ರೆಡ್ಡಿ, ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡುವುದರ ಜತೆಗೆ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ನಿತೀಶ್ ಕುಮಾರ್ ರೆಡ್ಡಿ ಅವರ ಆಕರ್ಷಕ ಶತಕದ ನೆರವಿನಿಂದ ಟೀಮ್ ಇಂಡಿಯಾ 110 ಓವರ್ಗಳ ಮುಕ್ತಾಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 350 ರನ್ ಕಲೆಹಾಕಿದೆ.
ಇದನ್ನೂ ಓದಿ : 9 ಕೋಟಿ ವಂಚನೆ ಕೇಸ್ಗೆ ಬಿಗ್ ಟ್ವಿಸ್ಟ್.. ಅಜ್ಞಾತ ಸ್ಥಳದಿಂದ ಐಶ್ವರ್ಯಾ ವಿಡಿಯೋ ರಿಲೀಸ್..!