ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ಇಂದು ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯಾದ್ಯಂತ ಹಲವು ಕಡೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 8ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ದಾಳಿ ನಡೆಸಿದ್ದು, ಬೆಂಗಳೂರಿನ RTO ಜಂಟಿ ಆಯುಕ್ತೆ ಶೋಭಾ, ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್ ನಿವಾಸದ ಮೇಲೆ ರೇಡ್ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಗದಗ ಜಿಲ್ಲೆಯ ಹಲವೆಡೆ ದಾಳಿ : ಗದಗ ಜಿಲ್ಲೆಯ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಗದಗ-ಬೆಟಗೇರಿ ನಗರಸಭೆ ಇಂಜಿಯರ್ ಹುಚ್ಚೇಶ್ ಬಂಡಿವಡ್ಡರ್ ಮನೆ, ಕಚೇರಿ, ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಐದು ಕಡೆ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ಈ ಕ್ರಮ ಕೈಗೊಂಡಿದೆ.
ಬಳ್ಳಾರಿ, ರಾಯಚೂರಲ್ಲೂ ಲೋಕಾ ರೇಡ್ : ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮನೆ, ರಾಯಚೂರು ಜಿಲ್ಲೆಯ ಬೆಸ್ಕಾಂ ಜೆಇ ಹುಲಿರಾಜ್ ಅವರ ಐಡಿಎಂಸಿ ಲೇಔಟ್ನಲ್ಲಿ ಇರುವ ಮನೆ ಮೇಲೆಯೂ ದಾಳಿ ನಡೆಸಲಾಗಿದ್ದು, ಲೋಕಾ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಬೀದರ್ : ಗಡಿ ಜಿಲ್ಲೆ ಬೀದರ್ನಲ್ಲಿಯೂ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗೆ ‘ಲೋಕಾಯುಕ್ತ’ ಬಿಸಿ ಮುಟ್ಟಿಸಿದೆ. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರಾಗಿರುವ ರವೀಂದ್ರ ಹನುಮಂತಪ್ಪ ಮೇತ್ರೆ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಏಕಕಾಲಕ್ಕೆ ಮೂರು ಕಡೆ ರೇಡ್ ಮಾಡಿರುವ ಅಧಿಕಾರಿಗಳು ಚಿಕ್ಕಪೇಟೆಯಲ್ಲಿರುವ ನಿವಾಸ, ಭಾಲ್ಕಿಯ ಡೋಣಗಾವಪೂರ್ ನಿವಾಸ ಹಾಗೂ ಬಸವಕಲ್ಯಾಣದ ಕಚೇರಿಯಲ್ಲಿ ಶೋಧ ನಡೆಸುತ್ತಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ದಾಳಿ ಮಾಡಿದ ಲೋಕಾ ಪೊಲೀಸರು., ಮನೆಯಲ್ಲಿ ತೀವ್ರ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ಲೋಕಾ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹಲವೆಡೆ ಶೋಧ : ಬೆಳಗಾವಿ ಜಿಲ್ಲೆಯ ಖಾನಾಪುರ ತಹಶೀಲ್ದಾರ್ ಪ್ರಕಾಶ್ ಶ್ರೀದರ್ ಮನೆ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ಬೆಳಗಾವಿ ನಗರದ ಲಕ್ಷ್ಮೀಟೆಕ್ನಲ್ಲಿರುವ ಪ್ರಕಾಶ್ ನಿವಾಸ, ತಹಶೀಲ್ದಾರ್ ಕಚೇರಿ, ನಿಪ್ಪಾಣಿಯ ನಿವಾಸ ಸೇರಿ 6 ಕಡೆ ದಾಳಿ ನಡೆದಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಲೋಕಾಯುಕ್ತ ಎಸ್‌ಪಿ ಹನುಮಂತರಾಯಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ತುಮಕೂರು : ಆರ್ಟಿಒದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಎಸ್ ರಾಜು ಮನೆ ಮೇಲೆ ದಾಳಿ ನಡೆದಿದೆ. ಎಸ್ ರಾಜು ಕಳೆದ ವರ್ಷ ನಿವೃತ್ತಿ ಹೊಂದಿದ್ದರು.
ಇದನ್ನೂ ಓದಿ : ಇಸ್ರೋದ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ಆಯ್ಕೆ – ಯಾರಿವರು ಗೊತ್ತಾ?