ಯಾದಗಿರಿ : ಜೆಡಿಎಸ್ ನ ಹಿರಿಯ ಕಟ್ಟಾಳು, ಮಾಜಿ ಶಾಸಕ ನಾಗನಗೌಡ ಕಂದಕೂರ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾಗನಗೌಡ ಕಂದಕೂರ ಅವರು ಇಂದು ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಗುರುಮಠಕಲ್‌ನ ಹಾಲಿ ಶಾಸಕ ಶರಣಗೌಡ ಕಂದಕೂರ ಅವರ ತಂದೆಯಾಗಿರುವ ನಾಗನಗೌಡ ಕಂದಕೂರ 2018ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ಕಟ್ಟಾ ಬೆಂಬಲಿಗರಾಗಿದ್ದರು.
ದಿ!! ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಾಗೂ ಅಖಂಡ ಕಲಬುರಗಿ ಜಿಲ್ಲಾ ಪರಿಷತ್ ಸದಸ್ಯರಾಗಿ , ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಇವರ ನಿಧನದ ಸುದ್ದಿ ತಿಳಿದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅಭಿಮಾನಿ ಬಳಗ ಆಸ್ಪತ್ರೆಗೆ ಧಾವಿಸಿದ್ದಾರೆ.
ನಾಗನಗೌಡ ಕಂದಕೂರ ಇವರಿಗೆ ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಳಗ್ಗೆ 11 ಗಂಟೆಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ನಾಗನಗೌಡ ಕಂದಕೂರು ವಿಧಿವಶ ಹಿನ್ನೆಲೆ ಶಾಸಕ ಶರಣಗೌಡ ಕಂದಕೂರು ತಂದೆಯ ಪಾರ್ಥಿವ ಶರೀರವನ್ನು ಅಂಬುಲೆನ್ಸ್‌ನಲ್ಲಿ ಯಾದಗಿರಿ ನಗರದ ಮನೆಗೆ ತೆಗೆದುಕೊಂಡು ಬಂದಿದ್ದಾರೆ.
ಮಾಜಿ ಶಾಸಕರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಖಾಸಗಿ ಆಸ್ಪತ್ರೆಗೆ ಅಬ್ಬೆತುಮಕೂರಿನ ವಿಶ್ವರಾಧ್ಯ ಗುರುಗಳು ಭೇಟಿ ನೀಡಿದ್ದಾರೆ. ತಂದೆ ನಿಧಾನರಾದ ಸುದ್ದಿ ಕೇಳಿ ಪುತ್ರ ಹಾಲಿ ಶಾಸಕ ಶರಣಗೌಡ ಕಂದಕೂರ ಹಾಗೂ ಸಹೋದರ ,ಸಹೋದರಿ ಸೇರಿದಂತೆ ತಾಯಿ ಕಣ್ಣೀರು ಹಾಕಿದ್ದಾರೆ. ಖಾಸಗಿ ಆಸ್ಪತ್ರೆಯ ಮುಂಭಾಗ ಹಾಗೂ ಮನೆಯ ಸುತ್ತ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದಾರೆ.
ಇದನ್ನೂ ಓದಿ : ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಪತನ – ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಿತೀಶ್ ಕುಮಾರ್..!