ಬೆಂಗಳೂರು : ಇತ್ತೀಚಿಗೆ ಹುಲಿ ಉಗುರಿನ ವಿಚಾರವಾಗಿ ಮಾತ್ನಾಡಿದ್ದ ಜಗ್ಗೇಶ್ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವನ್ನ ತಿರುಚಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಮಾತನಾಡುತ್ತಿರುವವರ ವಿರುದ್ಧ ಜಗ್ಗೇಶ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಜಗ್ಗೇಶ್ ದೂರು ಆಧರಿಸಿ ಪೊಲೀಸರು ಹೆಬ್ಬಗೋಡಿ ಮೂಲದ ನಾರಾಯಣಸ್ವಾಮಿ ಸೇರಿ ಇಬ್ಬರ ಮೇಲೆ FIR ದಾಖಲಿಸಿಕೊಂಡಿದ್ದಾರೆ. IPC-1850, ಸೆಕ್ಷನ್ 153, 504, 506 ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ನಾನು ಅಂದು ಮಾತನಾಡಿದ್ದನ್ನು ತಿರುಚಿ ಪ್ರಚಾರ ಮಾಡುತ್ತಿದ್ದಾರೆ, ಜಾತಿ ನಿಂದನೆ, ವ್ಯಕ್ತಿ ನಿಂದನೆ ಆಗುವಂತೆ ನನ್ನ ಹೇಳಿಕೆ ತಿರುಚಿದ್ದಾರೆ. ಅಲ್ಲದೇ ನನ್ನ ಮನೆಗೆ ಮುತ್ತಿಗೆ, ಮಸಿ ಬಳಿಯುವ ಬೆದರಿಕೆಯನ್ನೂ ಹಾಕಿದ್ದಾರೆ. ನಾರಾಯಣಸ್ವಾಮಿ ಎಂಬಾತ ತಪ್ಪು ಸಂದೇಶ ಹರಡಿಸಿ, ಹಲ್ಲೆ ಬೆದರಿಕೆ ಹಾಕಿದ್ದಾನೆ. ಹಾಗಾಗಿ ವಿಡಿಯೋ ಮಾಡಿರುವ ವ್ಯಕ್ತಿಯ ಮೇಲೆ ಕ್ರಮ ಜರುಗಿಸಿ ಎಂದು ಜಗ್ಗೇಶ್ ದೂರು ನೀಡಿದ್ದಾರೆ.
ರಂಗನಾಯಕ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ನೀಡಿದ್ದ ಹೇಳಿಕೆ ಭಾರೀ ವೈರಲ್ ಆಗಿತ್ತು. ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು ಎಂದು ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಹೇಳಿದ್ದರು.
ವರ್ತೂರು ಸಂತೋಷ್ ಬಗ್ಗೆ ಕಿತ್ತೋದ್ ನನ್ಮಗ ಎಂದು ಜಗ್ಗೇಶ್ ಹೇಳಿದ್ದು ಸರಿಯಲ್ಲ ಎನ್ನುವ ಟೀಕೆಗಳು ವ್ಯಕ್ತವಾಗಿತ್ತು. ಆದರೆ ಕೆಲವರು ಕ್ಷಮೆಗೆ ಪಟ್ಟು ಹಿಡಿದಿದ್ದರು. ಮನೆಗೆ ಮುತ್ತಿಗೆ ಹಾಕುವ ಮಾತುಗಳನ್ನಾಡಿದ್ದರು. ಹೆಬ್ಬಗೋಡಿ ಮಾಜಿ ನಗರಸಭೆ ಸದಸ್ಯ ನಾರಾಯಣ ಸ್ವಾಮಿ ಈ ಬಗ್ಗೆ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಜಗ್ಗೇಶ್ ಕ್ಷಮೆಗೆ ಆಗ್ರಹಿಸಿದ್ದರು. ಮತ್ತೊಬ್ಬ ವ್ಯಕ್ತಿ ಕೂಡ ಇದೇ ರೀತಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಹಾಗಾಗಿ ತಮ್ಮ ವಿರುದ್ಧ ಮಾತನಾಡುತ್ತಿರುವವರ ವಿರುದ್ಧ ಜಗ್ಗೇಶ್ ದೂರು ನೀಡಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯಗೆ ಅಲ್ಪ ಪ್ರಮಾಣದಲ್ಲಿ ಅನಾರೋಗ್ಯ – ವಿಶ್ರಾಂತಿಗಾಗಿ ಕಾವೇರಿ ನಿವಾಸಕ್ಕೆ ತೆರಳಿದ ಸಿಎಂ..!