ಬೆಂಗಳೂರು : ಕರ್ನಾಟಕ ಬಜೆಟ್ ಮಂಡನೆ ಕಾರ್ಯ ಹಾಗೂ ನಿರಂತರ ಜಿಲ್ಲಾ ಪ್ರವಾಸದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಲ್ಪ ಪ್ರಮಾಣದಲ್ಲಿ ಅನಾರೋಗ್ಯ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲು ಕಾವೇರಿ ನಿವಾಸಕ್ಕೆ ತೆರಳಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿಗಳು ಕಳೆದ ಕೆಲವು ದಿನಗಳಿಂದ ಬಜೆಟ್ ಸೇರಿದಂತೆ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡಿದ್ದರು. ಸುದೀರ್ಘ ಬಜೆಟ್ ಭಾಷಣ ಮತ್ತು 2 ದಿನ ನಿರಂತರ ಜಿಲ್ಲಾ ಪ್ರವಾಸಗಳಲ್ಲಿ ಭಾಷಣ ಮಾಡಿರುವ ಹಿನ್ನೆಲೆ ಸಿದ್ದರಾಮಯ್ಯನವರಿಗೆ ಗಂಟಲು ನೋವು ಸಮಸ್ಯೆ ಎದುರಾಗಿದೆ. ಹೀಗಾಗಿ ಇದೀಗ ವಿಶ್ರಾಂತಿ ಪಡೆಯಲು ಕಾವೇರಿ ನಿವಾಸಕ್ಕೆ ತೆರಳಿದ್ದಾರೆ.
ವಿಧಾನಮಂಡದಲ್ಲಿ ಅಧಿವೇಶನ ನಡೆಯುತ್ತಿದ್ದು, ಅನಾರೋಗ್ಯ ಕಾರಣದಿಂದಾಗಿ ಸಿಎಂ ಅಧಿವೇಶನದಿಂದ ಹೊರಗುಳಿದಿದ್ದಾರೆ. ಫೆಬ್ರವರಿ 16ರ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದರು. ಬಳಿಕ ಎರಡು ದಿನ ನಿರಂತರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು.
ಫೆ. 17ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿ ಮಂಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಬಳಿಕ ಫೆ.18ರ ಭಾನುವಾರ ಸಿಎಂ ಸಿದ್ದರಾಮಯ್ಯ ಮಂಡ್ಯ ಜಿಲ್ಲೆ ಪ್ರವಾಸ ಕೈಗೊಂಡಿದ್ದರು. ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಭಾಷಣ ಮಾಡಿದ್ದರು.