ಧಾರವಾಡ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಟದ ಮೇಲೆ ಐಟಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಎಲ್ಲೆಡೆ ಜಾಲಾಡುತ್ತಿದ್ದಾರೆ. ಮಂಗಳವಾರ ಧಾರವಾಡದಲ್ಲಿ ದಾಳಿ ನಡೆಸಿದ್ದು, ಫ್ಲ್ಯಾಟ್ ಒಂದರಲ್ಲಿ ಸಂಗ್ರಹಿಸಲಾಗಿದ್ದ ಬರೋಬ್ಬರಿ 18 ಕೋಟಿ ರೂ. ಹಣ ಜಪ್ತಿ ಮಾಡಿದ್ದಾರೆ.
ನಗರದ ನಾರಾಯಣಪುರ ಮುಖ್ಯ ರಸ್ತೆಯ ದಾಸನಕೊಪ್ಪ ಸರ್ಕಲ್ ಬಳಿಯ ಅರ್ಣಾ ರೆಸಿಡೆನ್ಸಿಯ ಮೂರನೇ ಮಹಡಿಯಲ್ಲಿರುವ ಬಸವರಾಜ್ ದತ್ತುನವರ್ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಮಾಡಿದ್ದು, ಈ ವೇಳೆ ಕಪಾಟುಗಳಲ್ಲಿರಿಸಿದ್ದ ಚೀಲಗಳಲ್ಲಿ ಹಣದ ಕಂತೆಗಳು ಪತ್ತೆಯಾಗಿವೆ. ಸುಮಾರು ರೂ. 18 ಕೋಟಿ ಹಣ ಇದೆ ಎಂದು ಹೇಳಲಾಗುತ್ತಿದ್ದು, IT ಅಧಿಕಾರಿಗಳು ಎಣಿಕೆ ಕಾರ್ಯ ನಡೆಸುತ್ತಿದ್ದಾರೆ. ಎಣಿಕೆ ಪೂರ್ಣಗೊಂಡ ಬಳಿಕವೇ ನಿಖರ ಮಾಹಿತಿ ಸಿಗಲಿದೆ. ಕಾಂಟ್ರಾಕ್ಟರ್ ಒಬ್ಬರಿಗೆ ಸೇರಿದ ಹಣ ಇದು ಎನ್ನಲಾಗ್ತಿದೆ.
ಮನೆಯಲ್ಲಿ ಮದ್ಯ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಮನೆಗೆ ತೆರಳಿ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಸುಮಾರು 6 ವಾಹನಗಳಲ್ಲಿ ಬಂದ 20ಕ್ಕೂ ಅಧಿಕಾರಿಗಳು ದಾಳಿ ಮಾಡಿದ್ದು, ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ರಾತ್ರಿ 10ರ ನಂತರವೂ ಪರಿಶೀಲನೆ, ಎಣಿಕೆ ಪ್ರಕ್ರಿಯೆ ನಡೆಯಿತು. ಹಣ ಎಲ್ಲಿಂದ ಬಂತು..? ಹೇಗೆ ಬಂತು ಅನ್ನುವ ವಿಚಾರಣೆ ನಡೆಸುತ್ತಿದ್ದಾರೆ.