ಬೆಂಗಳೂರು : ಇಡ್ಲಿ ಮಾರಾಟಕ್ಕೆ ಫ್ರಾಂಚೈಸಿ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ‘ಇಡ್ಲಿ ಗುರು’ ಕಂಪನಿ ಮಾಲೀಕ ಕಾರ್ತಿಕ್ ಶೆಟ್ಟಿ ಅವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಿಚಾರಣೆ ಮಾಡಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಂಚನೆಗೆ ಸಂಬಂಧಪಟ್ಟಂತೆ ಕಾರ್ತಿಕ್ ಶೆಟ್ಟಿ ಹಾಗೂ ಇತರರ ವಿರುದ್ಧ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದವು. ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಶೆಟ್ಟಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಬಂದಿರಲಿಲ್ಲ. ಮುಂಬೈ ಬಳಿ ಅವರನ್ನು ವಶಕ್ಕೆ ಪಡೆದು ನಗರಕ್ಕೆ ಕರೆತರಲಾಗಿತ್ತು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿ ಕಾರ್ತಿಕ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಗತ್ಯವಿದ್ದರೆ ಪುನಃ ವಿಚಾರಣೆಗೆ ಕರೆಯುವುದಾಗಿ ಹೇಳಿ ಅವರನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ₹ 3 ಲಕ್ಷ ವಾಪಸು ನೀಡಲು ಸಿದ್ಧ, ನಾನು ಯಾರಿಗೂ ವಂಚಿಸಿಲ್ಲ. ದೂರುದಾರ ಚೇತನ್ ಕಡೆಯಿಂದ ಒಪ್ಪಂದದ ಪ್ರಕಾರ ಫ್ರಾಂಚೈಸಿ ನೀಡಲು ₹ 3 ಲಕ್ಷ ಪಡೆದಿದ್ದೆ. ಅದನ್ನು ವಾಪಸು ನೀಡಲು ಒಪ್ಪಿದ್ದೆ.
ಆದರೆ, ಅವರು ₹ 5 ಲಕ್ಷ ನೀಡುವಂತೆ ಬೇಡಿಕೆ ಇರಿಸಿದ್ದರು ಎಂದು ಕಾರ್ತಿಕ್ ಶೆಟ್ಟಿ ವಿಚಾರಣೆಯಲ್ಲಿ ತಿಳಿಸಿದ್ದಾರೆ. ₹ 5 ಲಕ್ಷ ನೀಡಲು ಸಾಧ್ಯವಿಲ್ಲವೆಂದು ಚೇತನ್‌ಗೆ ಹೇಳಿದ್ದೆ. ಅವರ ವಕೀಲರ ಕಡೆಯಿಂದ ನೋಟಿಸ್ ಬಂದಿತ್ತು. ಅದಕ್ಕೆ ಉತ್ತರ ಕೊಟ್ಟಿದ್ದೆ. ಅದರ ನಡುವೆಯೇ ಚೇತನ್ ದೂರು ನೀಡಿದ್ದು, ಮಾಧ್ಯಮಗಳ ಮೂಲಕವೇ ಈ ವಿಷಯ ನನಗೆ ತಿಳಿಯಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ರಾಜಕೀಯಕ್ಕೆ ಡಾಲಿ ಧನಂಜಯ್ ಎಂಟ್ರಿ? ಮೈಸೂರು ಲೋಕಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹಗೆ ಎದುರಾಳಿ ಆಗ್ತಾರಾ ಖ್ಯಾತ ನಟ?