ಬೆಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಸದಾಶಿವನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 38 ವರ್ಷದ ಅನೂಪ್, 35 ವರ್ಷದ ರಾಖಿ ಹಾಗೂ ಇಬ್ಬರು ಮಕ್ಕಳಾದ (5) ಅನುಪ್ರಿಯ, (2) ಪ್ರಿಯಾಂಶು ಮೃತರೆಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಅಲಹಾಬಾದ್ ಮೂಲದ ದಂಪತಿಗಳಾದ ಅನೂಪ್-ರಾಖಿ ತಮ್ಮ ಮಕ್ಕಳನ್ನು ಕೊಂದು ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿಗಳ ಪ್ರಕಾರ, ಆನ್ಲೈನ್ ವ್ಯಾಪಾರ ಮಾಡುತ್ತಿದ್ದ ಅನೂಪ್ ದಂಪತಿಗಳಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿತ್ತು.
ಸಾಫ್ಟ್ವೇರ್ ಕನ್ಸಲ್ಟೆನ್ಸಿಯಲ್ಲೂ ಕೆಲಸ ಮಾಡುತ್ತಿದ್ದ ಅನೂಪ್, ಸಾವಿಗೆ ಕಾರಣಗಳನ್ನು ತಿಳಿಸಿ ತಮ್ಮನಿಗೆ ಡೆತ್ ನೋಟ್ ಇಮೇಲ್ ಮಾಡಿದ್ದಾರೆ. ‘ಕುಟುಂಬಸ್ಥರು ಯಾರು ಮಾತಾಡ್ತಿಲ್ಲ, ನಮ್ಮ ಬಗ್ಗೆ ವಿಚಾರಿಸ್ತಿಲ್ಲ. ಹಣ ಕೊಡಬೇಕಿದ್ದ ಸಂಬಂಧಿ ರಾಕೇಶ್ ಸತಾಯಿಸುತ್ತಿದ್ದಾನೆ. ತಂದೆಗೆ ಫೋನ್ ಮಾಡಿದ್ರೆ ಸಿಟ್ಟು ಮಾಡಿಕೊಂಡು ಮಾತಾನಾಡುತ್ತಿದ್ದರು. ಮೊದಲ ಮಗು ಬುದ್ದಿಮಾಂಧ್ಯ ಎಂಬ ಕಾರಣವನ್ನೆಲ್ಲ ಡೆತ್ ನೋಟ್ನಲ್ಲಿ ಅನೂಪ್ ಮೆನ್ಷನ್ ಮಾಡಿದ್ದಾರೆ.
ಮೇಲ್ನೋಟಕ್ಕೆ ಖಿನ್ನತೆಗೆ ಒಳಗಾಗಿ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಕಳೆದ ರಾತ್ರಿ ಮಕ್ಕಳನ್ನು ಕೊಂದು ದಂಪತಿಗಳು ಸಾವಿಗೆ ಶರಣಾಗಿದ್ದು, ಮನೆ ಕೆಲಸದವರು ಬೆಳಗ್ಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸದಾಶಿವನಗರ ಪೊಲೀಸರು ಭೇಟಿ ನೀಡಿದ್ದು, ಇಡೀ ಮನೆಯನ್ನು FSL ಟೀಂ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಜೆ.ಜೆ ನಗರದಲ್ಲಿ ಮಾರಕಾಸ್ತ್ರ ಹಿಡಿದು ಪುಂಡರ ಅಟ್ಟಹಾಸ.. ಇನ್ಸ್ಪೆಕ್ಟರ್ ಕೆಂಪೇಗೌಡ ಫುಲ್ ಸೈಲೆಂಟ್ – ಸಸ್ಪೆಂಡ್ಗೆ ಆಗ್ರಹ..!