ಬೆಳಗಾವಿ : ನೀರಾವರಿ ಯೋಜನೆಯ ವಿದ್ಯುತ್ ಬಿಲ್ 70 ಲಕ್ಷ ರೂ. ಪಾವತಿಸಿ ಎಂದು ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ನೋಟಿಸ್ ನೀಡಿದೆ. ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ಪೈಪ್ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದೆ. ಈ ಯೋಜನೆ ಪರಿಪೂರ್ಣವಾಗಿ ಜಾರಿಯಾದರೆ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಇಲ್ಲಿಯವರೆಗೆ ಕೇವಲ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆಯಷ್ಟೇ. ಸದ್ಯ ಗ್ರಾಮಗಳಿಗೆ ವಿತರಣೆ ಆಗುತ್ತಿಲ್ಲ. ಇದಕ್ಕೆ ವೆಚ್ಚವಾದ ಬಿಲ್ನ್ನು ಸಿದ್ದಗಂಗಾ ಮಠ ಪಾವತಿಸಬೇಕು ಎಂದು ಕೆಐಎಡಿಬಿ ಪತ್ರ ಬರೆದಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಇದೀಗ ಬೆಳಗಾವಿಯಲ್ಲಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದು, ಸಿದ್ದಗಂಗಾ ಮಠ 10 ಸಾವಿರ ಮಕ್ಕಳಿಗೆ ವಸತಿ, ಶಿಕ್ಷಣ ನೀಡ್ತಿದೆ. ಜಗತ್ತಿನಲ್ಲೇ ಸರ್ವಶ್ರೇಷ್ಠವಾದ ವಿದ್ಯಾದಾನದ ಕೇಂದ್ರ ಅದು. ಇಂಥಾ ಮಠಕ್ಕೆ ನೋಟಿಸ್ ಕೊಟ್ಟಿದ್ದು ಸರಿಯಲ್ಲ. 70 ಲಕ್ಷ ವಿದ್ಯುತ್ ಬಿಲ್ ಮನ್ನಾ ಮಾಡುತ್ತೇವೆ ಎಂದಿದ್ದಾರೆ.
ಅಧಿಕಾರಿಗಳ ತಪ್ಪು ಕಂಡು ಬಂದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ನಾನು ಕೆಐಎಡಿಬಿ ಸಿಇಒಗೆ ಹೇಳಿದ್ದೇನೆ. ನಾನು ಮಠದ ಸ್ವಾಮೀಜಿಯವರ ಜೊತೆಯೂ ಮಾತನಾಡುತ್ತೇನೆ. ನೀರು ಬಳಕೆ ಮಾಡಿರಲಿ, ಮಾಡದೇ ಇರಲಿ ಬಿಲ್ ಕಟ್ಟಬೇಕಿಲ್ಲ. ಮುಂದೆ ಕೆರೆಯ ನೀರನ್ನು ಬಳಸಲು ಪರವಾನಗಿಯನ್ನೂ ನೀಡುತ್ತೇವೆ ಎಂದು ಬೆಳಗಾವಿಯಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ : ಕೀರ್ತಿ ಸುರೇಶ್ ಮದುವೆಯಲ್ಲಿ ದಳಪತಿ ವಿಜಯ್ – ಫೋಟೋ ಹಂಚಿಕೊಂಡ ನಟಿ ಹೇಳಿದ್ದೇನು?