ಬೆಂಗಳೂರು : IPS ಅಧಿಕಾರಿ ಪ್ರತಾಪ್ ರೆಡ್ಡಿ ಅವರ ಸ್ವಯಂ ನಿವೃತ್ತಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪ್ರತಾಪ್ ರೆಡ್ಡಿಯವರು ವೈಯುಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಹಾಗಾಗಿ ಸರ್ಕಾರ ಏಪ್ರಿಲ್ 30ರಂದು ನಿವೃತ್ತಿಯಾಗಲು ಅನುಮತಿ ನೀಡಿದೆ.
ಜೂನ್ 30ರಂದು ನಿವೃತ್ತಿಯಾಗಬೇಕಿದ್ದ DGP ಪ್ರತಾಪ್ ರೆಡ್ಡಿಯವರು 2 ತಿಂಗಳು ಮೊದಲೇ ಸ್ವಯಂ ನಿವೃತ್ತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪ್ರತಾಪ್ ರೆಡ್ಡಿಯವರು ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಪ್ರತಾಪ್ ರೆಡ್ಡಿ ಅವರು 1991ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು.
ಪ್ರತಾಪ್ ರೆಡ್ಡಿ ಅವರು 1991ರಲ್ಲಿ ಕರ್ನಾಟಕ ಕೆಡರ್ನ ಐಪಿಎಸ್ ಅಧಿಕಾರಿಯಾಗಿ ಕಾರ್ಯವನ್ನು ಆರಂಭಿಸಿದ್ದರು. ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಹಾಯಕ ಸೂಪರಿಟೆಂಡೆಂಟ್ ಆಗಿ ಪ್ರತಾಪ್ ರೆಡ್ಡಿ ಅವರು ಕೆಲಸ ಆರಂಭಿಸಿದರು. ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಪಿಯಾಗಿ, ಸಿಐಡಿಯಾಗಿ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಅವರನ್ನು ಕಮಲ್ ಪಂತ್ ಅವರ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿತ್ತು. ಬಳಿಕ ಅವರನ್ನು ವರ್ಗಾವಣೆ ಮಾಡಿ ದಯಾನಂದ್ ಅವರನ್ನು ನಗರ ಪೊಲೀಸ್ ಆಯುಕ್ತರಾಗಿ ಸರ್ಕಾರ ನೇಮಕ ಮಾಡಿತ್ತು. ಸಿ.ಎಚ್.ಪ್ರತಾಪ್ ರೆಡ್ಡಿ ಅವರು ಸಿಬಿಐನಲ್ಲಿಯೂ ಕೆಲಸ ಮಾಡಿದ್ದಾರೆ. ಅಷ್ಟೆ ಅಲ್ಲದೆ ಪ್ರತಾಪ್ ರೆಡ್ಡಿ ಅವರು ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.
ಇದನ್ನೂ ಓದಿ : ಕೋಟಿ ಕೋಟಿ ವಂಚನೆ – ಎನ್ವಿ ಗ್ರೀನ್ ಬಯೋಟೆಕ್ ಕಂಪನಿ ಮಾಲೀಕ ಅಶ್ವಥ್ ಹೆಗ್ಡೆ ವಿರುದ್ಧ ಮತ್ತೊಂದು FIR ದಾಖಲು..!