ಗದಗ : ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ 38 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಯ ಜನರಲ್ ವಾರ್ಡ್, ಕಾರಿಡಾರ್, ಮಕ್ಕಳ ವಾರ್ಡ್, ತರಗತಿ ಕೊಠಡಿ ಸೇರಿದಂತೆ ಆಸ್ಪತ್ರೆಯ ಎಲ್ಲಾ ಭಾಗಗಳಲ್ಲಿ ರೀಲ್ಸ್ ಮಾಡುತ್ತಿದ್ದರು. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದರು.
ಇದರಿಂದ ರೋಗಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿತ್ತು. ಅಲ್ಲದೇ ಚಿಕಿತ್ಸೆಗೆ ತೆರಳಿದ್ದ ರೋಗಿಗಳಿಗೆ ಕಿರಿಕಿರಿ ಉಂಟಾಗುತ್ತಿತ್ತು. ರೀಲ್ಸ್ ಮಾಡುವ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ಬಗ್ಗೆ `ಪಬ್ಲಿಕ್ ಟಿವಿ’ಯಲ್ಲಿ ವರದಿ ಸಹ ಪ್ರಸಾರವಾಗಿತ್ತು. ಇದೀಗ ವರದಿಯಿಂದ ಎಚ್ಚೆತ್ತ ಜಿಮ್ಸ್ ಆಸ್ಪತ್ರೆಯ ಅಧಿಕಾರಿಗಳು, ರೀಲ್ಸ್ ಮಾಡಿದ್ದ 38 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ.
ಈ ಬಗ್ಗೆ ಜೀಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಮಾಹಿತಿ ನೀಡಿದ್ದು, ಜಿಮ್ಸ್‍ನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಡಿಸ್ಟ್ರಿಕ್ಟ್ ಸರ್ಜನ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿದ್ಯಾರ್ಥಿಗಳನ್ನು ಅಮಾನತು ಮಾಡುವ ನಿರ್ಧಾರ ತೆಗೆದುಕೊಂಡಿದ್ದೆವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರೀಲ್ಸ್ ಮಾಡಿರುವ ಎಲ್ಲರೂ ಎಂಬಿಬಿಎಸ್ ಇಂಟರ್ನ್‍ಶಿಪ್ ವಿದ್ಯಾರ್ಥಿಗಳು. ಅವರನ್ನು 10 ದಿನಗಳ ಕಾಲ ಅಮಾನತು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಈ ರೀತಿ ಮಾಡಿರುವುದು ದೊಡ್ಡ ಅಪರಾಧ. ಈ ರೀತಿ ವೀಡಿಯೋ ಮಾಡಲು ನಾವ್ಯಾರು ಅನುಮತಿ ಕೊಟ್ಟಿಲ್ಲ. ರೋಗಿಗಳಿಗೆ ಅನಾನುಕೂಲ ಆಗುವ ರೀತಿ ನಡೆದು ಕೊಂಡಿರುವುದು ತಪ್ಪು. ಯಾರೇ ಇರಲಿ, ಆಸ್ಪತ್ರೆಯಲ್ಲಿ ಈ ರೀತಿ ಮಾಡಿದರೆ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಪೋಸ್ಟಿಂಗ್ 10 ದಿನಗಳ ಕಾಲ ತಡವಾಗಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಚೋದನಕಾರಿ ಹೇಳಿಕೆ – ಕೆ.ಎಸ್ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲು..!