ಲೋಕಸಭೆ ಚುನಾವಣಾ ಅಖಾಡ ರಾಜ್ಯದಲ್ಲಿ ದಿನೇದಿನೆ ರಂಗೇರುತ್ತಿದೆ. ಹೀಗಿರುವಾಗ, ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಲಿಡ್ಕರ್ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಡಾಲಿ ಇದೀಗ ರಾಜಕೀಯದತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗಂತೂ ಅಚ್ಚರಿಗೆ ಕಾರಣವಾಗಿದೆ.
ವಿಧಾನಸಭಾ ಚುಣಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ. ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಕಾಂಗ್ರೆಸ್ ಮುಂದಿನ ಲೋಕಸಭಾ ಚುಣಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.
ಸದ್ಯದಲ್ಲೇ ಲೋಕಸಭೆ 2024 ಬರಲಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಡಾಲಿ ಹೆಸರು ಮುನ್ನಲೆಗೆ ತಂದಿದೆ. ಸದ್ಯ ಕೆಲವು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಖ್ಯಾತ ಚಿತ್ರ ನಟ ʻಬಡವರ ಮಕ್ಕಳು ಬೆಳೀಬೇಕುʼ ಖ್ಯಾತಿಯ ಡಾಲಿ ಧನಂಜಯ್ ಅವರನ್ನು ಕಾಂಗ್ರೆಸ್ ಮುಖಂಡರು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಡಾಲಿ ರಾಜ್ಯ ಸರ್ಕಾರ, ಕಾಂಗ್ರೆಸ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಈಗಾಗಲೇ ಮುಖಂಡರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಡಾಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮೈಸೂರಿನಿಂದ ಲೋಕಸಭಾ ಕಣಕ್ಕೆ ನಿಲ್ಲಿಸುವ ಸಾಧ್ಯತೆ ಇದೆ.
ಒಂದು ವೇಳೆ ಡಾಲಿ ಧನಂಜಯ ಅವರು ಮೈಸೂರು ಕ್ಷೇತ್ರದಲ್ಲಿ ಕಣಕ್ಕಿಳಿದರೆ ದೊಡ್ಡ ಮಟ್ಟದ ಸಂಚಲನವಂತೂ ಕ್ರಿಯೇಟ್ ಆಗಲಿದೆ. ಸಿದ್ದರಾಮಯ್ಯ ಜತೆ ಆಪ್ತ ಒಡನಾಟ ಹೊಂದಿರುವ ಡಾಲಿ ಅವರು ಜನಪ್ರಿಯ ನಟ ಆಗಿರುವ ಕಾರಣಕ್ಕೆ ಪ್ರಚಾರ ನಿರಾಯಾಸವಾಗಿ ನಡೆಯುತ್ತದೆ.
ಡಾಲಿ ಸಾಮಾಜಿಕ ಬದ್ಧತೆ, ಸೈದ್ಧಾಂತಿಕ ಸ್ಪಷ್ಟತೆ ಇರುವ ವ್ಯಕ್ತಿಯಾಗಿದ್ದು, ಧನಂಜಯ್ ಚಿಂತನೆಗಳು ಕಾಂಗ್ರೆಸ್‌ಗೆ ಹೆಚ್ಚು ಹತ್ತಿರವಾಗಿವೆ. ಪ್ರತಾಪ್ ಸಿಂಹ ಜನಪ್ರಿಯತೆ ಎದುರಿಗೆ ಡಾಲಿ ಜನಪ್ರಿಯತೆ ಬಳಸಿಕೊಂಡು ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಮುಖಂಡರು ಡಾಲಿಯನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ರಸ್ತೆ ಬದಿಯ ಅಂಗಡಿಯಲ್ಲಿ ಪತ್ನಿ ರಾಧಿಕಾಗೆ ಐಸ್‌ಕ್ಯಾಂಡಿ ಕೊಡಿಸಿದ ರಾಕಿಂಗ್ ಸ್ಟಾರ್ ಯಶ್ – ಸರಳತೆಯ ಸಾಹುಕಾರ ಎಂದ ಫ್ಯಾನ್ಸ್..!