ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಸಹಚರರು ಅರೆಸ್ಟ್ ಆಗಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಇದೀಗ ಮತ್ತೊಂದು ಸಂಕಷ್ಟ ಶುರುವಾಗಿದ್ದು, 2 ತಿಂಗಳ ಹಿಂದೆ ಸೂಸೈಡ್ ಮಾಡಿಕೊಂಡಿರೋ ಮ್ಯಾನೇಜರ್ ಕೇಸ್ ರೀ ಓಪನ್ ಆಗುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಆನೇಕಲ್ನ ಬಗ್ಗನದೊಡ್ಡಿಯಲ್ಲಿ 2 ಎಕ್ರೆ 36 ಗುಂಟೆ ವಿಸ್ತೀರ್ಣದಲ್ಲಿ ದರ್ಶನ್ ಒಡೆತನದ ದುರ್ಗಾ ಹೆಸರಿನ ಫಾರ್ಮ್ಹೌಸ್ ಇದ್ದು, ಈ ಫಾರ್ಮ್ಹೌಸ್ನಲ್ಲಿ 1 ವರ್ಷ ಮ್ಯಾನೇಜರ್ ಶ್ರೀಧರ್ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಮ್ಯಾನೇಜರ್ ಏಪ್ರಿಲ್ 17ನೇ ತಾರೀಖಿನಂದು ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದನು. ಫಾರ್ಮ್ಹೌಸ್ನ ಪಕ್ಕದ ಬಂಡೆ ಮೇಲೆ ರಕ್ತ ಕಕ್ಕಿರೋ ರೀತಿಯಲ್ಲಿ ಶ್ರೀಧರ್ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಕಂಡು ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದನು. ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿತ್ತು.
ಆತ್ಮಹತ್ಯೆಗೆ ಶರಣಾಗಿದ್ದ ಶ್ರೀಧರ್ ಅವರ ಡೆತ್ ನೋಟ್ ಸಹ ಆ ಸಮಯದಲ್ಲಿ ಪತ್ತೆಯಾಗಿತ್ತು, ‘ನನ್ನ ಸಾವಿಗೆ ನಾನೇ ಕಾರಣ, ಒಂಟಿತನ ಕಾಡುತ್ತಿದೆ ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶ್ರೀಧರ್ ಬರೆದುಕೊಂಡಿದ್ದ. ಇನ್ನು ವಿಡಿಯೋದಲ್ಲಿ ನನ್ನ ಸಾವಿಗೆ ನಾನೇ ಕಾರಣ ಅಂತ 10 ಸಲ ಹೇಳಿದ್ದನು. ಮಾತ್ರವಲ್ಲದೇ ಡೆತ್ನೋಟ್ನಲ್ಲಿ ಸಹಿ ಮತ್ತು ಹೆಬ್ಬೆಟ್ಟು ಹಾಕಿದ್ದನು. ಈ ಕಾರಣದಿಂದ ಇದೀಗ ಮ್ಯಾನೇಜರ್ ಶ್ರೀಧರ್ ಸಾವಿನ ಬಗ್ಗೆ ಭಾರೀ ಅನುಮಾನ ಹುಟ್ಟಿಕೊಂಡಿದೆ.
ಹೆಂಡ್ತಿಗೆ ವಾಪಸ್ ಬರ್ತೀನಿ ಅಂತ ಹೋದವ್ನು ಆಗಿದ್ದೇನು? ಸಾಲ ಕಟ್ಟೋಕ್ಕೆ ದುಡ್ಡು ತರ್ತೀನಿ ಅಂತ ಹೋದವ್ನು ಕೊಲೆಯಾದ್ನಾ? ಆನೇಕಲ್ ದುರ್ಗಾ ಫಾರ್ಮ್ಹೌಸ್ನಲ್ಲಿ ಬೇರೆ ವ್ಯವಹಾರ ನಡೀತಿತ್ತಾ? ಫಾರ್ಮ್ಹೌಸ್ ಅವ್ಯವಹಾರಗಳು ಮ್ಯಾನೇಜರ್ ಶ್ರೀಧರ್ಗೆ ಗೊತ್ತಿತ್ತಾ? ಈ ಕಾರಣಕ್ಕೆ ಬೆದರಿಸಿ ಶ್ರೀಧರ್ನನ್ನು ಕೊಂದ್ದಿದ್ದರಾ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ರಾ? ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿವೆ. ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಅವರ ಹಳೆಯ ಪ್ರಕರಣಗಳನ್ನು ಸಹ ಪೊಲೀಸರು ಜಾಲಾಡುತ್ತಿದ್ದು, ಶ್ರೀಧರ್ ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಯುವ ಸಂಭವ ಇದೆ.
ಇದನ್ನೂ ಓದಿ : ದರ್ಶನ್ ಕೇಸ್ ತಾರ್ಕಿಕ ಅಂತ್ಯ ಆಗೋವರೆಗೂ ಬಿಡಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೇ ಕೊಡಿಸುತ್ತೇವೆ – ಪೊಲೀಸ್ ಕಮಿಷನರ್ ಬಿ.ದಯಾನಂದ್..!