ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಅವರಿಗೆ ಹೈಕೋರ್ಟ್ ಬುಧವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ನಿನ್ನೆ ಸಂಜೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಳೆದ 63 ದಿನಗಳಿಂದ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದ ದರ್ಶನ್ಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಚಿಕಿತ್ಸೆಗಾಗಿ ದರ್ಶನ್ ಪರ ವಕೀಲರು ಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವೈದ್ಯರ ವರದಿ ಆಧರಿಸಿ 6 ವಾರಗಳ ಮಧ್ಯಂತರ ಜಾಮೀನು ನೀಡಿದೆ.
ನಟ ದರ್ಶನ್ ಅವರು 131 ದಿನಗಳ ನಂತರ ಜೈಲಿನಿಂದ ನಿನ್ನೆ ಹೊರ ಬಂದಿದ್ದು, ಜಾಮೀನು ಸಿಗ್ತಿದ್ದಂತೆ ಬಳ್ಳಾರಿಗೆ ತೆರಳಿದ ಪತ್ನಿ ವಿಜಯಲಕ್ಷ್ಮಿ ಅವರು ಪತಿ ದರ್ಶನ್ರೊಂದಿಗೆ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನ ಮನೆಗೆ ಬಂದಿದ್ದಾರೆ.
ತಡರಾತ್ರಿಯಾದರೂ ದರ್ಶನ್ ನೋಡಲು ವಿಜಯಲಕ್ಷ್ಮಿ ಮನೆ ಬಳಿ ಅಭಿಮಾನಿಗಳು ನೆರೆದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ‘ಡಿ ಬಾಸ್.. ಡಿ ಬಾಸ್..’ ಎಂದು ಜೈಕಾರ ಕೂಗಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ದರ್ಶನ್ ಪುತ್ರ ವಿನೀಶ್ ಸಮಾಧಾನ ಪಡಿಸಿದ್ದಾರೆ.
ನಿವಾಸದಿಂದ ಆಚೆ ಬಂದು ದರ್ಶನ್ ಪುತ್ರ ವಿನೀಶ್ ಮುಖ್ಯರಸ್ತೆ ತನಕ ನಡೆದುಕೊಂಡು ಬಂದು ಅಭಿಮಾನಿಗಳತ್ತ ಕೈಬೀಸಿದರು. ನಂತರ ಫ್ಯಾನ್ಸ್ ಅಭಿಮಾನಕ್ಕೆ ನಮಸ್ತೆ ಎಂದು ಸನ್ನೆ ಮಾಡಿದರು. ರಸ್ತೆ ಮಧ್ಯೆದಲ್ಲೇ ನಡೆದುಕೊಂಡು ಬಂದು ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ. ಮನವಿ ನಂತರವೂ ಅಲ್ಲೇ ಇದ್ದ ಅಭಿಮಾನಿಗಳ ಪೊಲೀಸರು ಓಡಿಸಿದ್ದಾರೆ. ಅಪಾರ್ಟ್ಮೆಂಟ್ ಬಳಿ ಸುಳಿಯದಂತೆ ಕಂಟ್ರೋಲ್ ಮಾಡಿದ್ದಾರೆ.
ಇಂದು (ಅ.31) ದರ್ಶನ್ ಪುತ್ರ ವಿನೀಶ್‌ಗೆ ಹುಟ್ಟುಹಬ್ಬದ ಸಂಭ್ರಮ. ಪುತ್ರನ ಹುಟ್ಟುಹಬ್ಬದ ದಿನವೇ ದರ್ಶನ್ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದಾರೆ. ಇಂದು ನಿವಾಸದಲ್ಲಿ ಪುತ್ರನ ಬರ್ತ್‌ಡೇ ಸಂಭ್ರಮದಲ್ಲಿ ಪಾಲ್ಗೊಂಡು ನಂತರ ದರ್ಶನ್ ಆಸ್ಪತ್ರೆಗೆ ಶಿಫ್ಟ್ ಆಗಲಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ : ವಿಜಯಪುರ ವಕ್ಫ್ ವಿವಾದ – ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆದ ಜಿಲ್ಲಾಡಳಿತ..!