ಬೆಂಗಳೂರು : 18ನೇ ಲೋಕಸಭಾ ಚುನಾವಣೆಯ ಕಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಭರ್ಜರಿ ತಯಾರಿ ನಡೆಸುತ್ತಿದೆ. ಇದರ ನಡುವೆ ಇಂದು ಮುಂಜಾನೆ ಟಿವಿ ಚಾನೆಲ್ಗಳ ಮುಖ್ಯಸ್ಥರನ್ನು ತಮ್ಮ ಅಧಿಕೃತ ಸರ್ಕಾರಿ ನಿವಾಸ ಕಾವೇರಿಗೆ ಉಪಹಾರಕ್ಕೆ ಆಹ್ವಾನಿಸಿದ್ದ ಸಿದ್ದರಾಮಯ್ಯ ಅವರು ರಾಜಕಾರಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಮಾಧ್ಯಮದವರ ಮುಂದೆ ಪ್ರಸ್ತಾಪಿಸಿದ್ದಾರೆ.
ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ 15 ರಿಂದ 20 ಸ್ಥಾನ ಗೆಲ್ಲುತ್ತೇವೆ. ಬಿಜೆಪಿಗೆ ಸೋಲುವ ಭಯ, ಅದಕ್ಕಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ಜೊತೆ ಮೈತ್ರಿಯಿಂದ ಬಿಜೆಪಿ ಮತ್ತಷ್ಟು ಸ್ಥಾನ ಕಳೆದುಕೊಳ್ಳುತ್ತದೆ ಎಂದು ವಾಗ್ದಳಿ ನಡೆಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಈ ಬಾರಿ ಖಂಡಿತ ಸೋಲುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಎನ್ ಡಿ ಆರ್ ಎಫ್ ಫಂಡ್ ನಲ್ಲಿ ಒಂದು ನಯಾ ಪೈಸ ಬಂದಿಲ್ಲ ಒಂದು ವೇಳೆ ಒಂದು ರೂಪಾಯಿ ಬಂದಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಕೊಟ್ಟರೆ ನಾನು ರಾಜೀನಾಮೆ ಕೊಡುತ್ತೇನೆ ಇಲ್ಲದಿದ್ದರೆ ಅವರು ಸಚಿವ ಸ್ಥಾನ ತ್ಯಜಿಸಬೇಕು ಎಂದು ಗುಡುಗಿದ್ದಾರೆ.
ಕಳೆದ ವರ್ಷ 36,000 ಕೋಟಿ ಗ್ಯಾರೆಂಟಿ ಯೋಜನೆಗೆ ಕೊಟ್ಟಿದ್ದೇವೆ. ಈ ವರ್ಷ 50,000 ಕೋಟಿ ರೂ ಗ್ಯಾರಂಟಿ ಯೋಜನೆಗೆ ಕೊಡುತ್ತಿದ್ದೇವೆ. ಕೇಂದ್ರ ಕೊಡುವ ಹಣವನ್ನು ನಾವು ಗ್ಯಾರೆಂಟಿ ಯೋಜನೆಗೆ ಬಳಸಿಕೊಳ್ಳುವುದಿಲ್ಲ. ಕೇಂದ್ರಕ್ಕೆ ಪ್ರತಿ ವರ್ಷ ಕರ್ನಾಟಕದಿಂದ 4 ಲಕ್ಷ 30,000 ಕೋಟಿ ತೆರಿಗೆ ಪಾವತಿಯಾಗುತ್ತಿದೆ. ಆದರೆ ಕರ್ನಾಟಕಕ್ಕೆ ಕೇವಲ 50,000 ಕೋಟಿ ವಾಪಸ್ ಬರುತ್ತಿದೆ ಅಂದರೆ ಶೇಕಡ 13ರಷ್ಟು ಮಾತ್ರ ನಮಗೆ ತಲುಪುತ್ತಿದೆ ಎಂದು ಸಿಎಂ ಸಿದ್ದು ಕಿಡಿಕಾರಿದ್ದಾರೆ.
ನಮಗೆ ತೆರಿಗೆ ಹಣ ಎಂಡಿರ್ಎಫ್ ಎಫ್ ಹಣ ಸೇರಿದಂತೆ ಎಲ್ಲದರಲ್ಲೂ ಅನ್ಯಾಯ ಮಾಡಲಾಗುತ್ತಿದೆ ಅದಕ್ಕಾಗಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ. ಕರ್ನಾಟಕದಲ್ಲಿ ರಾಮ ಮಂದಿರದ ಅಲೆಯೂ ಇಲ್ಲ, ಅದೇ ರೀತಿ ಮೋದಿ ಅಲೆಯೂ ಇಲ್ಲ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಇನ್ನಷ್ಟು ಸ್ಥಾನಗಳಲ್ಲಿ ಸೋಲುತ್ತದೆ. ಇಬ್ಬರು ಕಾರ್ಯಕರ್ತರು ಪರಸ್ಪರ ಒಗ್ಗೂಡುವುದಿಲ್ಲ. ಮಂಡ್ಯದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ನಮ್ಮ ಗ್ಯಾರೆಂಟಿ ನಮ್ಮ ಕೈ ಹಿಡಿಯುತ್ತದೆ ಎಂದು ಸಿದ್ದರಾಮಯ್ಯ ಹಲವು ವಿಚಾರಗಳನ್ನು ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರ ಜೊತೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ತುಮಕೂರಿನಲ್ಲಿ ತಪ್ಪಿದ ಭಾರೀ ರೈಲು ದುರಂತ – ಸಾವಿರಾರು ಜನರ ಜೀವ ಉಳಿಸಿದ ಲೋಕೋ ಪೈಲೆಟ್ ಸಮಯ ಪ್ರಜ್ಞೆ..!