ಬೆಂಗಳೂರು : ಕರ್ನಾಟಕಕ್ಕೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಚೀನಾದಲ್ಲಿ ಕಾಡುತ್ತಿರುವ ಡೇಂಜರ್ ಮಹಾಮಾರಿ ಹೆಚ್ಎಂಪಿವಿ (Human Metapneumovirus) ರಾಜ್ಯದ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡಿದೆ.
ಬೆಂಗಳೂರಿನ 8 ತಿಂಗಳ ಗಂಡು ಮಗುವಿನಲ್ಲಿ ವೈರಸ್ ಪತ್ತೆಯಾದ ಬೆನ್ನಲ್ಲೇ 3 ತಿಂಗಳ ಹೆಣ್ಣು ಮಗುವಿನಲ್ಲೂ ವೈರಸ್ ಪತ್ತೆಯಾಗಿದೆ ಎಂದು ICMR (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಆ ಮೂಲಕ ಕರ್ನಾಟಕದಲ್ಲಿ ಚೀನಾ ವೈರಸ್ ಇರೋದು ದೃಢವಾಗಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ಕರೆದಿದ್ದಾರೆ. ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿ, ತುರ್ತಾಗಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಐಸಿಎಂಆರ್ ಅಧಿಕೃತ ಮಾಹಿತಿಗೂ ಮೊದಲು ಪ್ರತಿಕ್ರಿಯಿಸಿದ್ದ ಗುಂಡೂರಾವ್, ಆಸ್ಪತ್ರೆಗೆ ದಾಖಲಾಗಿರುವ ಮಗುವಿನಲ್ಲಿ ವೇರಿಯೆಂಟ್ ಪತ್ತೆಯಾಗಿದೆ. ಪುಣೆ ಲ್ಯಾಬ್ಗೆ ಮಗುವಿನ ಕಫ ಮಾದರಿ ಕಳಿಸುತ್ತೇವೆ. ಮಗುವಿಗೆ ಸಮಸ್ಯೆ ಇಲ್ಲ, ಆರಾಮವಾಗಿದೆ ಎಂದು ಹೇಳಿದ್ದಾರೆ.
ಇದು ಹಳೆಯ ವೈರಸ್, ಎಚ್ಚರಿಕೆ ವಹಿಸಲೇಬೇಕು. ನಮ್ಮಲ್ಲೂ ಈ ವೈರಸ್ ಇದೆ ಅನ್ನೋ ಮಾಹಿತಿ ಇದೆ. ಟೆಸ್ಟ್ ಮಾಡಿದ್ರೆ ಬಹುತೇಕರಲ್ಲಿ ಪತ್ತೆ ಆಗಬಹುದು. ಆದ್ರೆ ಇದರ ಪರಿಣಾಮಗಳ ಬಗ್ಗೆ ಚರ್ಚೆ ಮಾಡ್ಬೇಕು. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಕಾಡುತ್ತೆ. ಶೇಕಡಾ 1 ರಷ್ಟು ತೀವ್ರತೆ ಇರುವ ಬಗ್ಗೆ ಮಾಹಿತಿ ಇದೆ. ಎಲ್ಲಾ ಕಡೆ ಟೆಸ್ಟ್ ಮಾಡಿದ್ರೆ ಮಕ್ಕಳು, ವೃದ್ಧರಲ್ಲಿ ಕಾಣಿಸಬಹುದು. ಹೀಗಾಗಿ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ತೇವೆ. ಈಗಾಗಲೇ ಕೆಲವು ಗೈಡ್ಲೈನ್ಸ್ಗಳನ್ನು ಜಾರಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಕೇಂದ್ರಕ್ಕೆ ಮಾಹಿತಿ : ಮಗುವಿನಲ್ಲಿ ವೈರಸ್ ಪತ್ತೆಯಾದ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದೂಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಸೂಚಿಸಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ – ಇಬ್ಬರು ಮಕ್ಕಳನ್ನು ಕೊಂದು ಸಾವಿಗೆ ಶರಣಾದ ದಂಪತಿ..!