ಬೆಂಗಳೂರು : ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಬಿಜೆಪಿ ರಾಜ್ಯ ನಾಯಕರು ಹಾಗೂ ಹೈಕಮಾಂಡ್ ನಿರ್ಧರಿಸಿದೆ. ಅಲ್ಲದೆ, ಶೆಟ್ಟರ್ ಜೊತೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ರಾಜ್ಯದ ನಾಯಕರು ವರಿಷ್ಠರ ಮೇಲೆ ಹಾಕಿದ್ದು, ಖುದ್ದು ಅಮಿತ್ ಶಾ ಅವರೇ ಅಖಾಡಕ್ಕಿಳಿದಿದ್ದಾರೆ. ಶೆಟ್ಟರ್ ಜೊತೆ ಬಿಜೆಪಿ ತೊರೆದು ಕಾಂಗ್ರೆಸ್ ಸೆರ್ಪಡೆಯಾಗಿ ಶಾಸಕರಾಗಿರುವ ಲಕ್ಷ್ಮಣ ಸವದಿ ಕೂಡ ಪಕ್ಷಕ್ಕೆ ವಾಪಸ್ ಆಗುವ ಲಕ್ಷಣಗಳು ಕಾಣುತ್ತಿವೆ.
ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ ಲೋಕ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷ ಬಿಟ್ಟುಹೋದ ಎಲ್ಲರನ್ನು ವಾಪಸ್ಸು ಕರೆತರುವ ಕೆಲಸ ತಮ್ಮ ಪಕ್ಷ ಮಾಡುತ್ತಿದೆ ಎಂದು ಹೇಳಿದ್ದಾರೆ. ಹೇಗೆ ರಾಮ ಭಾರತವನ್ನು ಒಂದುಗೂಡಿಸಿದನೋ ಹಾಗೆಯೇ ಬಿಜೆಪಿ ವಿಚಾರಧಾರೆಯನ್ನು ಒಪ್ಪಿಕೊಂಡಿರುವ ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ನಡೆದಿದೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು. ಲೋಕಸಭೆ ಚುನಾವಣೆ ಗೆಲ್ಲೋದೇ ಬಿಜೆಪಿಯ ಗುರಿಯಾಗಿದೆ. ಯಾರು ಯಾರು ಪಕ್ಷದಿಂದ ದೂರ ಆದ್ರೂ ಕರೆತರುತ್ತೇವೆ. ಎಲ್ಲರನ್ನೂ ಕರೆ ತಂದು ಒಟ್ಟಾಗಿ ಹೋಗುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಒಬ್ಬ ಹಿರಿಯ ನಾಯಕರಾಗಿರುವುದರಿಂದ ಅವರೊಂದಿಗೆ ಕೇಂದ್ರದ ನಾಯಕರು ಮಾತಾಡಲಿದ್ದಾರೆ, ಆದರೆ ಉಳಿದ ನಾಯಕರೊಂದಿಗೆ ರಾಜ್ಯದ ವರಿಷ್ಠರು ಮಾತಾಡುತ್ತಾರೆ ಎಂದು ಸುನೀಲ್ ಕುಮಾರ್ ಹೇಳಿದರು. ಲೋಕಸಭಾ ಚುನಾವಣೆ ಗೆಲ್ಲಲು ಅಂತ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸುನೀಲ್ ಕುಮಾರ್ ನಿರ್ದಿಷ್ಟವಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತಾರೆ. ಅಂದರೆ ಪಕ್ಷ ಬಿಟ್ಟುಹೋದವರ ಮೇಲಿನ ಪ್ರೀತಿ, ಸ್ನೇಹ ಮತ್ತು ಬಾಂಧವ್ಯಗಳಿಗೋಸ್ಕರ ಕರೆದೊಯ್ಯುವ ಪ್ರಯತ್ನ ಬಿಜೆಪಿ ನಾಯಕರದಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : 83 ಲಕ್ಷ ರೂ. ಪಡೆದು ಕಳಪೆ ದರ್ಜೆಯ ಡ್ರೋನ್ ಮಾರಾಟ – ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ಗಂಭೀರ ಆರೋಪ..!