ಬೆಂಗಳೂರು : ಸ್ಮಾರ್ಟ್ ಸಿಟಿ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೊಸದೇನಲ್ಲ ಬಿಡಿ. ಬಸ್ಸು, ಕಾರು, ಬೈಕ್ ಹಾಗೂ ಇತರೆ ವಾಹನಗಳು ಟ್ರಾಫಿಕ್ ಜಾಮ್‌ನಿಂದ ಗಂಟೆಗಟ್ಟಲೆ ನಿಂತಿರುವುದನ್ನು ನಾವು ನೋಡಿರುತ್ತೇವೆ. ಆದರೆ ಇದೀಗ ರೈಲು ಕೂಡ ಟ್ರಾಫಿಕ್ ಜಾಮ್‌ನಲ್ಲಿಗೆ ಸಿಲುಕಿದ ಘಟನೆ ನಡೆದಿದೆ.
ಅಂದ ಹಾಗೆ ಈ ಘಟನೆ ನಡೆದಿರುವುದು ಬೆಂಗಳೂರಿನ ಮಾರತಹಳ್ಳಿ ಸಮೀಪದ ಮುನ್ನೆಕೊಲ್ಲಾಲ ರೈಲ್ವೆ ಕ್ರಾಸಿಂಗ್ ಬಳಿ. ಟ್ರಾಫಿಕ್ ಜಾಮ್‌ನಿಂದ ರೈಲ್ವೆ ಕ್ರಾಸಿಂಗ್ ಬಳಿಯೂ ಸಾಲಾಗಿ ವಾಹನಗಳು ನಿಂತಿದ್ದು, ಪರಿಣಾಮ ರೈಲ್ವೆ ಕ್ರಾಸಿಂಗ್ ದಾಟಲು ಆಗದೇ ರೈಲು ಕೂಡಾ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದೆ.
ಇನ್ನು ರೈಲು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ದೃಶ್ಯ ಕಂಡು ನಮ್ ಬೆಂಗ್ಳೂರು ಅಂದ್ರೆ ಸುಮ್ನೇನಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸ್ಟೇಷನ್ ಮಾಸ್ಟರ್ ರೈಲು ಏಕೆ ತಡವಾಗಿ ಬಂತು ಎಂದು ಕೇಳಿದ್ರೆ ಪಾಪ ಲೋಕೋ ಪೈಲೆಟ್ ಟ್ರಾಫಿಕ್ ಸಮಸ್ಯೆ ಅಂತ ಅದು ಹೆಂಗ್ ಹೇಳ್ತಾರೋʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರತಿ ಸಾರಿ ರೈಲು ದಾಟುವಾಗ ನಾವು ಕಾಯ್ತೇವೆ. ಈ ಸಲ ರೈಲು ನಾವು ದಾಟುವವರೆಗೆ ಕಾಯಲಿʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ನಮ್ಮ ಬೆಂಗ್ಳೂರು ಅಂದ್ರೆ ಸುಮ್ನೇನಾ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಮಿಲ್ಕ್ ಪೌಡರ್ ಕಳ್ಳ ಸಾಗಾಟ ಮಾಡ್ತಿದ್ದ ಖದೀಮರು ಅಂದರ್..!