ಕನ್ನಡದ ಚಿತ್ರರಂಗದ ‘ಅಭಿನಯ ಶಾರದೆ’ ಜಯಂತಿ ಅವರ ಹುಟ್ಟುಹಬ್ಬದ ಹಿನ್ನೆಲೆ ಜಯಂತಿ ಜೀವನದ ಕುರಿತು ಹಿರಿಯ ಪತ್ರಕರ್ತ ಸದಾಶಿವ ಶೆಣೈ ಬರೆದಿರುವ ‘ಲವ್ಲಿ ಅಂಡ್ ಲೋನ್ಲಿ’ ಪುಸ್ತಕವನ್ನು ನಿನ್ನೆ (ಜ.7) ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪುಸ್ತಕ ಲೋಕಾರ್ಪಣೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕಲಾವಿದರಾದ ಪ್ರೇಮ್, ರಮೇಶ್ ಅರವಿಂದ್, ರಾಕ್ಲೈನ್ ವೆಂಕಟೇಶ್, ಪೂಜಾ ಗಾಂಧಿ, ಹಿರಿಯ ನಟಿ ಭವ್ಯಾ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸೇರಿ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಜಯಂತಿ ಅವರ ಜೊತೆಗಿನ ಒಡನಾಟದ ಬಗ್ಗೆ ಮಾತಾನಾಡಿ, ‘ಅಭಿನಯ ಶಾರದೆ’ ನಟಿ ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದ್ದಾರೆ. ನಟಿ ಜಯಂತಿ ಅವರು ನನ್ನನ್ನು ಸದಾ ಪ್ರೀತಿಯಿಂದ ಹೀರೋ ಎಂದು ಕರೆಯುತ್ತಿದ್ದರು. ಜಯಂತಿ ಅವರು ಅಪಾರ ಮನುಷ್ಯತ್ವ ಹೊಂದಿದ್ದ ಸ್ನೇಹಜೀವಿ ಆಗಿದ್ದರು. ಕಲಾವಿದೆಯಾಗಿ ಜಯಂತಿಗೆ ಜಯಂತಿಯವರೇ ಸಾಟಿ ಆಗಿದ್ದರು. ಅವರು ಮಾನವೀಯವಾಗಿ ಬದುಕನ್ನು ನಡೆಸಿ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ನನ್ನ ಮತ್ತು ಜಯಂತಿ ಅವರ ರಾಜಕೀಯ ಮೌಲ್ಯಗಳು ಒಂದೇ ಆಗಿತ್ತು. ಅವರು ಸಮಾಜ ಪ್ರೇಮಿ, ಮಾನವೀಯತೆಯ ಪ್ರೇಮಿ ಆಗಿದ್ದರು’ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
‘ಹಿಂದೆ ವಿಶ್ವದ ಯಾವುದೇ ಭಾಷೆಯ ಸಿನಿಮಾಗಳಿಗೆ ಹೋಲಿಸಿದರೆ, ಕನ್ನಡ ಭಾಷೆ ಸಿನಿಮಾಗಳು ಒಳ್ಳೆಯ ಗುಣಮಟ್ಟ ಕಾಯ್ದುಕೊಂಡಿದ್ದವು. ನಾನು ಸದಾ ನಮ್ಮ ಕನ್ನಡ ಚಿತ್ರರಂಗದ ಪ್ರೋತ್ಸಾಹಕ್ಕೆ ನಿಲ್ಲುತ್ತೇನೆ. ಕನ್ನಡ ಸಿನಿಮಾಗಳಿಗೆ ಶೇ.100 ತೆರಿಗೆ ವಿನಾಯಿತಿ ಘೋಷಿಸಿದ್ದು ನಾನೇ.’ ದಿವಂಗತ ಪಿ.ಲಂಕೇಶ್ ಅವರು ನನಗೆ ಗುರುಗಳ ರೀತಿ. ಪತ್ರಿಕೆ ಕಚೇರಿಗೆ ಹೋಗಿ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದೆ ಎಂದು ನೆನೆಪಿಸಿಕೊಂಡಿದ್ದಾರೆ.
ಇದನ್ನೂ ಓದಿ : ಇಬ್ರಾಹಿಂ ಅಲಿ ಖಾನ್ ಜೊತೆ ಶ್ರೀಲೀಲಾ ಮಿಂಚಿಂಗ್ – ಬಾಲಿವುಡ್‌ಗೆ ಹಾರಿದ್ರಾ ಕನ್ನಡದ ಚೆಲುವೆ ?