ಬೆಂಗಳೂರು : ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ನಿನ್ನೆ ಕಾಲ್ತುಳಿತ, ನೂಕು ನುಗ್ಗಲು ಉಂಟಾಗಿ 11 ಮಂದಿ ಸಾವನ್ನಪ್ಪಿರೋ ದಾರುಣ ಘಟನೆ ನಡೆದಿದೆ. ಆರ್ಸಿಬಿ ಆಟಗಾರರನ್ನ, ಟ್ರೋಫಿಯನ್ನ, ಕಣ್ತುಂಬಿಕೊಳ್ಳೋಕೆ ಬಂದಿದ್ದ ಫ್ಯಾನ್ಸ್ ಸ್ಟೇಡಿಯಂ ಒಳಗೆ ಏಕಾಏಕಿ ನುಗ್ಗೋಕೆ ಯತ್ನಿಸಿದ್ದ ವೇಳೆ ಕಾಲ್ತುಳಿತ ಸಂಭವಿಸಿ ದುರಂತ ನಡೆದಿದೆ. ಘಟನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗಳಾಗಿ ಅಸ್ವಸ್ಥಗೊಂಡಿದ್ದು, ಸದ್ಯ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತದ ಬಗ್ಗೆ ಆರ್ಸಿಬಿ ಹೇಳಿದ್ದೇನು? ಮಾಧ್ಯಮಗಳ ಮೂಲಕ ಬೆಳಕಿಗೆ ಬಂದ ಇಂದಿನ ಘಟನೆ ಬಗ್ಗೆ ತೀವ್ರ ನೊಂದಿದ್ದೇವೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಜೀವ ಕಳೆದುಕೊಂಡವರಿಗಾಗಿ ಆರ್ಸಿಬಿ ಶೋಕಿಸುತ್ತಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದೆ.
ಪರಿಸ್ಥಿತಿ ಬಗ್ಗೆ ತಿಳಿದ ತಕ್ಷಣವೇ ಕಾರ್ಯಕ್ರಮದಲ್ಲಿ ತಿದ್ದುಪಡಿ ಮಾಡಿಕೊಂಡಿದ್ದೇವೆ. ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಗಳನ್ನು ಅನುಸರಿಸಿದ್ದೇವೆ. ಆರ್ಸಿಬಿಯ ಎಲ್ಲಾ ಬೆಂಬಲಿಗರು ದಯವಿಟ್ಟು ಸುರಕ್ಷಿತವಾಗಿರಲು ವಿನಂತಿಸುತ್ತೇವೆ.. ಅಂತಾ ಆರ್ಸಿಬಿ ಅಧಿಕೃತವಾಗಿ ಪೋಸ್ಟ್ ಬಿಡುಗಡೆ ಮಾಡಿದೆ.
ಆಗಿದ್ದೇನು..? ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ತಂಡವು ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದೇ ಖುಷಿಯಲ್ಲಿ ರಾಜ್ಯ ಸರ್ಕಾರ ನಿನ್ನೆ ವಿಧಾನಸೌಧದ ಮುಂಭಾಗದಲ್ಲಿ ಆರ್ಸಿಬಿ ಟೀಂಗೆ ಹಾಗೂ ಟೀಂನ ಮ್ಯಾನೇಜ್ಮೆಂಟ್ಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು. ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ, ಫ್ಯಾನ್ಸ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದಿದ್ದಾರೆ. ಆಗ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ನಡೆದು ಅನಾಹುತ ಆಗಿದೆ.
ಇದನ್ನೂ ಓದಿ : ಬೌರಿಂಗ್ ಕ್ಲಬ್ ಭೂಹಗರಣದ ತನಿಖೆ ಆರಂಭ – ಆರಕ್ಕೂ ಹೆಚ್ಚು ಕಮಿಟಿ ಸದಸ್ಯರು ಜೈಲು ಸೇರೋದು ಫಿಕ್ಸ್!
