ಜೀ5ನ ಬಹುನಿರೀಕ್ಷಿತ ವೆಬ್ ಸರಣಿ – “ರಾಕ್ಷಸ” ವೆಬ್ ಸರಣಿಯ ಟ್ರೇಲರ್ ರಿಲೀಸ್!

ಇದೇ ಫೆಬ್ರವರಿ 20ರಿಂದ ಜೀ5ನಲ್ಲಿ ಪ್ರಸಾರಗೊಳ್ಳಲಿರುವ ಈ ವೆಬ್ ಸರಣಿಯು ಒಂದು ಕ್ರೈಂ ಥ್ರಿಲ್ಲರ್ ಕಥೆಯಾಗಿದ್ದು ಒಂದು ಘಟನೆಯ ಸುತ್ತ ನಡೆಯುವ ವಿವಿಧ ರೋಚಕ ಘಟನೆಗಳನ್ನು ಆಧರಿಸಿರುತ್ತದೆ. ಮಲಪ್ರಭಾ ನದಿಯ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನು 7 ಸಂಚಿಕೆಗಳಲ್ಲಿ ಈ‌ ವೆಬ್ ಸರಣಿಯು ಹೇಳುತ್ತದೆ.

ಈ ಟ್ರೈಲರ್ ಸಬ್ ಇನ್ಸ್ಪೆಕ್ಟರ್ ಹನುಮಪ್ಪ ಎಂಬ ಪಾತ್ರವನ್ನು ಪರಿಚಯಿಸುತ್ತದೆ. ಸವದತ್ತಿಯ ಎಲ್ಲಮ್ಮನ ಗುಡಿಯ ಬಳಿ‌ ಮೊಸಳೆ ದಾಳಿಗೆ ಒಳಗಾಗುವ ಸರಣಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಹನೂಮಪ್ಪ ಬರುತ್ತಾನೆ. ಈ ಗೋಜಲಾದ ಪ್ರಕರಣಗಳ ಚಕ್ರವ್ಯೂಹವನ್ನು ಭೇದಿಸಲು ಬರುವ‌ ಹನುಮಪ್ಪನಿಗೆ ಆಗುವ ತಳಮಳ,‌ ಎದುರಾಗುವ ಸಮಸ್ಯೆಗಳು, ಇದು ಕೇವಲ ಒಂದು ಅಪರಾಧವೇ ಅಥವಾ ಬೇರೆ ಯಾವುದಾದರೂ ಮರ್ಮ ಅಡಗಿದೆಯೇ,‌ ಇವೆಲ್ಲವನ್ನೂ ಕಾದು ನೋಡಬೇಕಿದೆ.

ಸುಹಾನ್ ಪ್ರಸಾದ್ ಮತ್ತು ಅಪೂರ್ವ ಅವರ ಬರವಣಿಗೆಯಲ್ಲಿ ಮೂಡಿ ಬರುತ್ತಿರುವ ಈ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ,‌ ಮಯೂರಿ, ಅವಿನಾಶ್,‌ ಮಾಳವಿಕಾ, ಅಪ್ಪಣ್ಣ,‌ಅಭಿಜೀತ್ ಮುಂತಾದವರು ನಟಿಸಿರುತ್ತಾರೆ. ಇದಕ್ಕೆ ಸುಹಾನ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರ ತರುಣ್ ಸುಧೀರ್ ಕ್ರಿಯೇಟಿವ್ಸ್ ಲಾಂಛನದಲ್ಲಿ ಈ ವೆಬ್ ಸರಣಿಯು ನಿರ್ಮಾಣಗೊಂಡಿದೆ. ಇದು ತರುಣ್ ಸುಧೀರ್ ಅವರ ಮೊದಲ ವೆಬ್ ಸರಣಿಯಾಗಿರುತ್ತದೆ.

ಇದರ ಕುರಿತು ಮಾತನಾಡಿದ ನಟ ವಿಜಯ್ ರಾಘವೇಂದ್ರ, “ರಾಕ್ಷಸ ಒಂದು ವಿಶೇಷವಾದ ಕಥೆಯಾಗಿದೆ. ಅಷ್ಟು ಸುಲಭವಾಗಿ ಇದು ತನ್ನ ಸಸ್ಪೆನ್ಸ್ ಅಂಶಗಳನ್ನು ಬಿಟ್ಟುಕೊಡುವುದಿಲ್ಲ. ನನಗೆ ಈ ಕಥೆಯ ಬಗ್ಗೆ ಇಷ್ಟವಾಗಿದ ಅಂಶಗಳು: ಇದರಲ್ಲಿರುವ ಮೌನ, ಆಡದ ಮಾತುಗಳು, ಗೋಜಲಾದ ರಹಸ್ಯಗಳು. ಇವೆಲ್ಲವೂ ಹೇಗೆ ಹನುಮಪ್ಪನ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂಬುದು ಗಮನಾರ್ಹವಾಗಿದೆ. ಈಗಾಗಲೇ ಈ ರೋಚಕ ಕಥೆಯ ತುಣುಕು ಟ್ರೇಲರ್ ನಲ್ಲಿ ಬಿಡುಗಡೆ ಆಗಿದೆ” ಎಂದು ಹೇಳಿದರು.

ಇದರ‌ ಕುರಿತು ಮಾತನಾಡಿದ ನಿರ್ಮಾಪಕ ತರುಣ್ ಸುಧೀರ್, “ವಿಭಿನ್ನ ಕಥೆಗಳನ್ನು ನಿರ್ಮಾಣ ಮಾಡಬೇಕೆಂಬುದು ನನ್ನ ಆಸೆ. ಅದೇ ನಿಟ್ಟಿನಲ್ಲಿ ‘ರಾಕ್ಷಸ’ ನನ್ನ ಗಮನಕ್ಕೆ ಬಂತು. ಈ ಕಥೆಯು ಉತ್ತರ ಕರ್ನಾಟಕದ ಛಾಯೆಯನ್ನು ಹೊಂದಿರುತ್ತದೆ. ಇದು ಎಲ್ಲರ ಗಮನ ಸೆಳೆಯುವುದರಲ್ಲಿ‌ ಯಾವುದೇ ಸಂಶತವಾಲ್ಲ. ಮಲಪ್ರಭಾ ನದಿಯ ರಹಸ್ಯವನ್ನು ರೋಚಕವಾಗಿ ಕಥೆ ಬಿಡಿಸಲಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿಭಿನ್ನವಾದ ಕಥಾ ಹಂದರ, ಉತ್ತಮ ಛಾಯಾಗ್ರಹಣ,‌ ಆಳವಾದ‌‌ ಅಭಿನಯ ಇವೆಲ್ಲವುದರ‌ ಮೂಲಕ “ರಾಕ್ಷಸ” ಎಲ್ಲರ ಗಮನ ಸೆಳೆಯಲು ಸಜ್ಜಾಗಿದೆ.

ಜೀ5 ಕಿರುಪರಿಚಯ:
ಜೀ5 ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿದ್ದು, ಬಹುಭಾಷಾ ಕಥೆಗಳನ್ನು ಇಡೀ ಪ್ರಪಂಚಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಇದು ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ಅವರ ಡಿಜಿಟಲ್/ ಓ ಟಿ ಟಿ (OTT) ಮಾಧ್ಯಮವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.

ಇದನ್ನೂ ಓದಿ : ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಉಪೇಂದ್ರ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ಕಾಶ್ಮೀರದಲ್ಲಿ ಚಿತ್ರೀಕರಣ!

Btv Kannada
Author: Btv Kannada

Read More