“ಮರಳಿ ಮನಸಾಗಿದೆ” ಟ್ರೇಲರ್ ರಿಲೀಸ್ – ಫೆ.12ಕ್ಕೆ ಸಿನಿಮಾ ತೆರೆಗೆ!

ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ ನವೀನ್ ಕುಮಾರ್ ಆರ್ ಓ ತೆಲಿಗಿ ಮಲ್ಲಿಕಾರ್ಜುನಪ್ಪ, ನಾಗರಾಜ್ ಶಂಕರ್ ಹಾಗೂ ಆಶಿತ್ ಸುಬ್ರಹ್ಮಣ್ಯ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ “ಮರಳಿ ಮನಸಾಗಿದೆ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಟ್ರೇಲರ್​ನಲ್ಲೇ ಕುತೂಹಲ ಕೆರಳಿಸಿರುವ ಈ ಚಿತ್ರ ಫೆಬ್ರವರಿ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನವೇ ಬೆಂಗಳೂರು ಸೇರಿದಂತೆ ಕೆಲವು ಕಡೆ ಪೇಡ್ ಪ್ರೀಮಿಯರ್ ಆಗಿದೆ. ಪ್ರೀಮಿಯರ್​ನಲ್ಲಿ ಚಿತ್ರ ನೋಡಿದವರ ಮನಸ್ಸು ಖುಷಿಯಾಗಿದೆ.

ನಾಯಕ ಅರ್ಜುನ್ ವೇದಾಂತ್ ಅವರು, ಹತ್ತು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಚಿತ್ರ “ಮರಳಿ ಮನಸಾಗಿದೆ” ಇದೇ ಫೆಬ್ರವರಿ 12 ರಂದು ಬಿಡುಗಡೆಯಾಗುತ್ತಿದೆ. ನಾನು ನಟಿಸಿದ್ದ “ಕುಡ್ಲ ಕೆಫೆ” ಚಿತ್ರ 2016 ಫೆಬ್ರವರಿ 12ರಂದು ಬಿಡುಗಡೆಯಾಗಿತ್ತು. ಈಗ ಹತ್ತು ವರ್ಷಗಳ ನಂತರ ಈ ಚಿತ್ರ ತೆರೆಗೆ ಬರುತ್ತಿದೆ. ಹಾಡುಗಳು ಹಾಗೂ ಟೀಸರ್ ಮೂಲಕ ಈಗಾಗಲೇ ಜನರ ಈ ಚಿತ್ರ ಜನರ ಮನ ತಲುಪಿದೆ. ಟ್ರೇಲರ್​ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಡುಗಡೆಗೂ ಮುನ್ನ ಬೆಂಗಳೂರು, ಪುತ್ತೂರು, ಉಡುಪಿ ಮುಂತಾದ ಕಡೆ “ಮರಳಿ ಮನಸಾಗಿದೆ” ಚಿತ್ರದ ಪೇಡ್ ಪ್ರೀಮಿಯರ್‌ ಏರ್ಪಡಿಸಿದ್ದೆವು. ಅಲ್ಲಿ ನಮ್ಮ ಚಿತ್ರ ನೋಡಿದವರು ನೀಡಿದ ಪ್ರತಿಕ್ರಿಯೆಗೆ ಮನ ತುಂಬಿ ಬಂದಿದೆ. ಚಿತ್ರ ಬಿಡುಗಡೆ ಆದ ಮೇಲೂ ಜನರಿಂದ ಇದೇ ಅಭಿಪ್ರಾಯ ಬರುವ ಭರವಸೆ ಇದೆ ಎಂದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾನು ಚಿತ್ರರಂಗಕ್ಕೆ ಬರಲು ಸ್ಪೂರ್ತಿ, ಸಾಮಾನ್ಯವಾಗಿ ಪ್ರೀಮಿಯರ್ ಶೋಗೆ ಮೊದಲು ಟ್ರೇಲರ್ ರಿಲೀಸ್ ಮಾಡುತ್ತಾರೆ. ಆದರೆ ನಾವು ಪೇಡ್ ಪ್ರಿಮಿಯರ್ ಮುಗಿಸಿ ಈಗ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ನಿಮ್ಮ ಮುಂದೆ ಇದೇ ಫೆಬ್ರವರಿ 12 ರಂದು ಬರಲಿದೆ. ಚಿತ್ರಮಂದಿರಗಳಲ್ಲೇ ನಮ್ಮ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದು ನಿರ್ಮಾಪಕ ಮುದೇಗೌಡ ನವೀನ್ ಕುಮಾರ್ ಆರ್. ಓ ಹೇಳಿದರು.

ನಿರ್ದೇಶಕ ನಾಗರಾಜ್ ಶಂಕರ್ ಅವರು, “ಮರಳಿ ಮನಸಾಗಿದೆ” ನನ್ನ ಸಿನಿಪಯಣದ ಮೊದಲ ಚಿತ್ರ. ನಾನು ಮೂಲತಃ ಎಂಜಿನಿಯರ್. ಎಂಟು ಕಡೆ ನಮ್ಮ ಚಿತ್ರದ ಪೇಡ್ ಪ್ರಿಮಿಯರ್ ನಡೆದಿದೆ. ಸಾವಿರಕ್ಕೂ ಹೆಚ್ಚು ಜನರು ನಮ್ಮ ವೀಕ್ಷಿಸಿದ್ದಾರೆ. ನೋಡಿವರೆಲ್ಲರೂ ಚಿತ್ರದ ಬಗ್ಗೆ ಆಡಿದ ಪ್ರಶಂಸೆಯ ಮಾತಗಳನ್ನು ಕೇಳಿ ಬಹಳ ಖುಷಿಯಾಗಿದೆ. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಮೋಸವಾಗದ ಚಿತ್ರವಿದು.‌ ಇದೊಂದು ಸಾಮಾನ್ಯ ಪ್ರೇಮಕಥೆಯಲ್ಲ. ಉತ್ತಮ ಕಂಟೆಂಟ್ ವುಳ್ಳ ಚಿತ್ರ. ಸಾಮಾನ್ಯ ಜನರಿಗೂ ತಲುಪುವ ಚಿತ್ರ ಎಂದರು.

ನಾಯಕಿಯರಾದ ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್, ನಟ ಗಿರೀಶ್ ಜತ್ತಿ, ಸಂಗೀತ ನಿರ್ದೇಶಕ ವಿನು ಮನಸು, ಛಾಯಾಗ್ರಾಹಕ ಹಾಲೇಶ್ ಹಾಗೂ ವಿಜಯ್ ಸುಬ್ರಹ್ಮಣ್ಯ, ಹರೀಶ್ ಎಸ್ ಎಂ, ಸಂಜಯ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು. ಟಿ.ಎಸ್.ನಾಗಾಭರಣ, ಮಾನಸಿ ಸುಧೀರ್, ಭೋಜರಾಜ್ ವಾಮಂಜೂರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Btv Kannada
Author: Btv Kannada

Read More