ಬೆಂಗಳೂರು : ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಡ್ರಗ್ಸ್ ಪಾರ್ಟಿಗಳಿಗೆ ಕಿಕ್ ಹೆಚ್ಚಿಸಲು ಯತ್ನಿಸುತ್ತಿದ್ದ ಅಂತರರಾಷ್ಟ್ರೀಯ ಡ್ರಗ್ ಜಾಲಕ್ಕೆ ಬೆಂಗಳೂರಿನ ಸಿಸಿಬಿ ಪೊಲೀಸರು ಭರ್ಜರಿ ಬ್ರೇಕ್ ಹಾಕಿದ್ದಾರೆ. ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬರೋಬ್ಬರಿ 28 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸೀಜ್ ಮಾಡಲಾಗಿದ್ದು, ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.

ಸಿಸಿಬಿ ಪೊಲೀಸರು ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿ, ಒಟ್ಟು 28 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ 10 ಕೆಜಿ ಎಂಡಿಎಂಎ (MDMA) ಮತ್ತು 8 ಕೆಜಿ ಹೈಡ್ರೋ ಗಾಂಜಾ ಸೇರಿವೆ. ತಾಂಜೇನಿಯಾದ ನ್ಯಾನ್ಸಿ ಮತ್ತು ನೈಜೀರಿಯಾದ ಎಮುನಲ್ ಎಂಬ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.

ಟೂರಿಸ್ಟ್ ವೀಸಾದಡಿ 3 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ನ್ಯಾನ್ಸಿ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಳು. ಆಕೆಯ ಸಹಚರ ಸದ್ಯ ಪರಾರಿಯಾಗಿದ್ದಾನೆ. ಬಿಸಿನೆಸ್ ವೀಸಾದಡಿ 4 ವರ್ಷಗಳ ಹಿಂದೆ ಬಂದಿದ್ದ ಎಮುನಲ್ ಸಿದ್ಧಾಪುರ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ. ದೆಹಲಿಯಿಂದ ಡ್ರಗ್ಸ್ ತರಿಸಿ ಮನೆಯಲ್ಲಿ ಶೇಖರಿಸಿದ್ದ. ಈ ಆರೋಪಿಗಳು ಹೊಸ ವರ್ಷಾಚರಣೆಗಾಗಿ ಸ್ಥಳೀಯರು, ವಿದ್ಯಾರ್ಥಿಗಳು ಮತ್ತು ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾದಕ ವಸ್ತುಗಳನ್ನು ಮಾರಲು ಸಂಚು ರೂಪಿಸಿದ್ದರು.

ಚಾಮರಾಜಪೇಟೆ ಪೋಸ್ಟ್ ಆಫೀಸ್‌ನಲ್ಲಿ ವಿದೇಶದಿಂದ ಬಂದ ಪಾರ್ಸೆಲ್‌ಗಳನ್ನು ಪರಿಶೀಲಿಸಿದಾಗ ಸುಮಾರು 8 ಕೋಟಿ ರೂ. ಮೌಲ್ಯದ 8 ಕೆಜಿ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಒಟ್ಟು 28 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಬೆಂಗಳೂರಿನ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿದ್ದಾರೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಸಿಎಂ ಸಿದ್ದು, ಕೆಸಿ ವೇಣುಗೋಪಾಲ್ – ಸಮಾವೇಶಕ್ಕೂ ಮುನ್ನ ಹೈವೋಲ್ಟೇಜ್ ಮೀಟಿಂಗ್!







