ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಬಿಎಸ್ ಯಡಿಯೂರಪ್ಪನವರ ವಿಚಾರಣೆಗೆ ಇದೀಗ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.
ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪನವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ತನಿಖೆಯ ಉದ್ದೇಶದಿಂದ ಬಿಎಸ್‌ವೈಗೆ ನೀಡಿದ್ದ ಸಮನ್ಸ್ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೀಗ ಮಧ್ಯಂತರ ತಡೆ ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗಿದೆ. ಹಿಂದಿನ ಸುತ್ತಿಯ ತೀರ್ಪಿನ ಕಾರಣ ನೀಡಿ ಹೈಕೋರ್ಟ್ ಪರಿಗಣಿಸಲಿಲ್ಲ ಎಂದು ಹಿರಿಯ ವಕೀಲರು ಯಡಿಯೂರಪ್ಪ ಪರವಾಗಿ ವಾದ ಮಂಡಿಸಿದ್ದರು. ವಾದ ಆಲಿಸಿದ ಸುಪ್ರೀಂ ಕೋರ್ಟ್ ಪೋಕ್ಸೋ ಪ್ರಕರಣದಲ್ಲಿ ವಿಚಾರಣೆಗೆ ಮಧ್ಯಂತರ ತಡೆಯನ್ನು ನೀಡಿದೆ. ಇದರಿಂದಾಗಿ ಯಡಿಯೂರಪ್ಪನವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಪ್ರಕರಣ ಏನು?
ಕಳೆದ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ 17 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿತ್ತು. ಸಂತ್ರಸ್ತೆಯ ತಾಯಿಯೇ ಈ ಬಗ್ಗೆ ಆರೋಪಿಸಿದ್ದರು. ಮಾರ್ಚ್ 14, 2024ರಂದು ಸದಾಶಿವನಗರ ಪೊಲೀಸರಿಂದ ಬಿಎಸ್ವೈ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ, ಮುಂದಿನ ತನಿಖೆಗಾಗಿ ಇದನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಸಿಐಡಿ ಮರು FIR ದಾಖಲಿಸಿ, ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿತ್ತು.
ಇದನ್ನೂ ಓದಿ : ಸಚಿನ್ ಶೆಟ್ಟಿ ನಿರ್ದೇಶನ ‘ಸಮುದ್ರ ಮಂಥನ’ ಸಿನಿಮಾದ ಶೂಟಿಂಗ್ ಕಂಪ್ಲೀಟ್!







