ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳು ಬಳಕೆ ಮಾಡುತ್ತಿದ್ದ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನ ಜೈಲಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಜೈಲಿನಲ್ಲಿ ಅಕ್ರಮವಾಗಿ ಸಿಗುತ್ತಿದ್ದ ಬೀಡಿ ಹಾಗೂ ಸಿಗರೇಟ್ನ್ನು ಬಂದ್ ಮಾಡಿದ್ದಕ್ಕೆ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಊಟ ತಿಂಡಿ ಬಿಟ್ಟು ಧರಣಿ ಮಾಡುತ್ತಿರುವ ಬಂಧಿತರು ನಿಷೇಧಿತ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಜೈಲಿನ ಕೈಪಿಡಿ ಅನುಸಾರ ಬೀಡಿ ಹಾಗೂ ಸಿಗರೇಟ್ ವ್ಯಾಪಾರ ಮಾಡುವುದು ಕಾನೂನುಬಾಹಿರ. ಜೈಲು ಸಿಬ್ಬಂದಿ ಅದಕ್ಷತೆ ಹಾಗೂ ಕುಮ್ಮಕ್ಕಿನಿಂದ ಬಂಧಿಗಳು ಅಕ್ರಮವಾಗಿ ನಿಷೇಧಿತ ವಸ್ತುಗಳನ್ನ ಮಾರಾಟ ಮಾಡುತ್ತಿದ್ದರು. ಇದನ್ನ ನಿಯಂತ್ರಿಸಲು 20 ಮಂದಿ ಅಧಿಕಾರಿ ಹಾಗೂ ಸಿಬ್ಭಂದಿ ಒಳಗೊಂಡ ವಿಶೇಷ ಶೋಧ ತಂಡ ರಚಿಸಿತ್ತು. ಈ ತಂಡವು ತಪಾಸಣೆ ನಡೆಸಿ 50ಕ್ಕಿಂತ ಹೆಚ್ಚು ಮೊಬೈಲ್ ಫೋನ್ಗಳನ್ನ ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೇ ಜೈಲಿನೊಳಗೆ ಮಾರಾಟವಾಗುತ್ತಿದ್ದ ಬೀಡಿ ಹಾಗೂ ಸಿಗರೇಟ್ ಕಡಿವಾಣ ಹಾಕಿತ್ತು.
ಇದರಿಂದ ಅಸಮಾಧಾನಗೊಂಡಿರುವ ಕೈದಿಗಳು ಊಟ ತ್ಯಜಿಸಿ ಮೂರು ದಿನಗಳಿಂದ ಪ್ರತಿಭಟನೆಗೆ ಇಳಿದಿದ್ದಾರೆ. ಬಿಡಿ, ಸಿಗರೇಟ್ ಮಾರಾಟಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಪರಪ್ಪನ ಅಗ್ರಹಾರ ಜೈಲಿನೊಳಗಿರುವ ಆಡಳಿತ ಕಚೇರಿ ಮುಂದೆ ಧರಣಿ ಮಾಡುತ್ತಿದ್ಧಾರೆ. ಈ ಬಗ್ಗೆ ಜೈಲಾಧಿಕಾರಿಗಳು ಜೈಲಿನ ನಿಯಾಮವಳಿ ಬಗ್ಗೆ ತಿಳಿ ಹೇಳಿದ್ದರೂ ಪಟ್ಟು ಹಿಡಿದು ಕುಳಿತಿದ್ಧಾರೆ.
ಕೈದಿಗಳು ಜೈಲಿನೊಳಗೆ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಭೆ ನಡೆಸಿ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತು ಮಾಡಿದ್ದರು. ಇದರ ಬಳಿಕ ಸರ್ಕಾರ ರಾಜ್ಯದ ಎಲ್ಲಾ ಕಾರಾಗೃಹಗಳ ಸುಧಾರಣೆಗಾಗಿ ಉನ್ನತ ಮಟ್ಟದ ಹೈಪವರ್ ಸಮಿತಿಯನ್ನು ರಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದ ಸಮಿತಿ, ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿ ಅಲ್ಲಿ ಜಾರಿಯಲ್ಲಿರುವ ಆಡಳಿತ, ತಾಂತ್ರಿಕ ವ್ಯವಸ್ಥೆ, ಬಂಧಿಗಳ ಪುನರ್ವಸತಿ ಕಾರ್ಯಕ್ರಮ ಸೇರಿದಂತೆ ಅನೇಕ ಸುಧಾರಣಾತ್ಮಕ ಕ್ರಮಗಳನ್ನು ಅಧ್ಯಯನ ಮಾಡಿದೆ. ನಂತರ ಮಂಗಳೂರು ಹಾಗೂ ಕಲಬುರಗಿ ಜೈಲುಗಳಿಗೂ ಭೇಟಿ ನೀಡಿ ಸಿಬ್ಬಂದಿ ಕೊರತೆ, ಜೈಲು ಸಾಮರ್ಥ್ಯಕ್ಕೆ ಹೋಲಿಸಿದರೆ ಬಂಧಿಗಳ ಹೆಚ್ಚುವರಿ ಸಂಖ್ಯೆ, ಸುರಕ್ಷತಾ ವ್ಯವಸ್ಥೆ ಮತ್ತು ಆಧುನಿಕ ತಂತ್ರಜ್ಞಾನ ಬಳಕೆಯಂತಹ ಅಂಶಗಳನ್ನು ಪರಿಶೀಲಿಸಲಾಗಿದೆ.
ಇದನ್ನೂ ಓದಿ : ಕಿಶನ್ ರಾವ್ ನಿರ್ದೇಶನದ ‘ವೇಷಗಳು’ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ!







