ಡಾ. ಎಸ್ ನಾರಾಯಣ್ ನಿರ್ದೇಶನದ “ಮಾರುತ” ರಿಲೀಸ್ ಪೋಸ್ಟ್​​ಪೋನ್ – ನ.21ಕ್ಕೆ ಸಿನಿಮಾ ತೆರೆಗೆ!

ಡಾ. ಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ “ಮಾರುತ” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಕೆ.ಮಂಜು – ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಈ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದೆ. ನಿಗದಿಯಂತೆ ಇದೇ ಅಕ್ಟೋಬರ್ 31 ರಂದು “ಮಾರುತ” ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಪ್ರಸ್ತುತ ಚಿತ್ರಮಂದಿರಗಳ ಅಭಾವವಿರುವ ಕಾರಣ ಚಿತ್ರತಂಡ “ಮಾರುತ” ಚಿತ್ರದ ಬಿಡುಗಡೆಯನ್ನು ಮೂರು ವಾರ ಮುಂದೂಡಿದೆ‌‌. ನವೆಂಬರ್ 21 ರಂದು ರಾಜ್ಯಾದ್ಯಂತ “ಮಾರುತ” ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರ ಆರಂಭದಿಂದಲೂ ತಾವೆಲ್ಲಾ ನೀಡುತ್ತಾ ಬಂದಿರುವ ಪ್ರೋತ್ಸಾಹಕ್ಕೆ ಧನ್ಯವಾದ. ನಿಮ್ಮ ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ ಎಂದು ಚಿತ್ರತಂಡ ಮನವಿ ಮಾಡಿದೆ.

ಸದಭಿರುಚಿಯ ಚಿತ್ರಗಳ ನಿರ್ದೇಶಕ ಎಸ್ ನಾರಾಯಣ್‌ ಅವರ ನಿರ್ದೇಶನ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ದುನಿಯಾ ವಿಜಯ್ ಮತ್ತು ಉತ್ಸಾಹಿ ಯುವ ನಟ ಶ್ರೇಯಸ್ ಕೆ ಮಂಜು ಅವರ ಕಾಂಬಿನೇಶನ್​ನಲ್ಲಿ ಮೂಡಿಬಂದಿರುವ ಈ ಚಿತ್ರದ ಬಿಡುಗಡೆಗೆ ಕನ್ನಡ ಕಲಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿ ಬಂದಿರುವ “ಮಾರುತ” ಚಿತ್ರಕ್ಕೆ ಎಸ್ ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನವಿದ್ದು, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ. ಎಸ್ ನಾರಾಯಣ್ ಹಾಗೂ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ.

ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು‌, ಬೃಂದಾ(ನಾಯಕಿ), ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಮುಂತಾದವರ ತಾರಾಬಳಗವಿರುವ ಈ ಚಿತ್ರದ ವಿಶೇಷಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿಸಿದ್ದಾರೆ.

ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಹಾವಳಿ – BMTC ಬಸ್ ಡ್ರೈವರ್, ಕಂಡಕ್ಟರ್ ಮೇಲೆ ಹಲ್ಲೆ!

Btv Kannada
Author: Btv Kannada

Read More