ಸುಧೀರ್ ಆನಂದ್ ಅಭಿನಯದ ಪ್ರಸನ್ನ ಕುಮಾರ್ ಕೋಟ ನಿರ್ದೇಶನದ ಸಿನಿಮಾದ ಮಹೂರ್ತ ಸಮಾರಂಭ ನೆರವೇರಿದೆ. ಶಿವ ಚೆರಿ, ರವಿಕಿರಣರವರ ವಜ್ರ ವಾರಾಹಿ ಸಿನಿಮಾಸ್ ಪ್ರೊಡಕ್ಷನ್ ನಂ.1ಗೆ ʼಹೈಲೆಸ್ಸೂ” ಎಂದು ಟೈಟಲ್ ಇಡಲಾಗಿದೆ. ಇಂದು ಅದ್ದೂರಿಯಾಗಿ ಲಾಂಚ್ ಆದ “ಹೈಲೆಸ್ಸೂ” ಚಿತ್ರದ ಮುಹೂರ್ತ ಶಾಟ್‌ಗೆ ವಿ.ವಿ.ವಿನಾಯಕ್ ಕ್ಲಾಪ್ ಮಾಡಿದ್ದಾರೆ.

ಸ್ಮಾಲ್ ಸ್ಕ್ರೀನ್ ಹಾಗೂ ಬಿಗ್ ಸ್ಕ್ರೀನ್ ಎರಡರಲ್ಲಿಯೂ ಗುರುತಿಸಿಕೊಂಡಿರೋ ಸುಧೀರ್ ಆನಂದ್ “ಹೈಲೆಸ್ಸೂ” ಚಿತ್ರಕ್ಕೆ ನಾಯಕನಾಗಿದ್ದಾರೆ. ಪ್ರಸನ್ನ ಕುಮಾರ್ ಕೋಟ ಈ ಚಿತ್ರದ ಮೂಲಕ ಡೈರೆಕ್ಟರ್ ಆಗಿ ಟಾಲಿವುಡ್ಗೆ ಎಂಟ್ರಿಕೊಡ್ತಿದ್ದಾರೆ. ಶಿವ ಚೆರಿ ಮತ್ತು ರವಿಕಿರಣ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಇದು ಸುಧೀರ್ ಆನಂದ್ ನಾಯಕನಾಗಿ ನಟಿಸುತ್ತಿರುವ ಐದನೇ ಸಿನಿಮಾ. ಗ್ರಾಮೀಣ ಹಿನ್ನೆಲೆಯ ಡ್ರಾಮಾ ಆಗಿ ರೂಪುಗೊಳ್ಳುತ್ತಿರುವ ಈ ಚಿತ್ರದಲ್ಲಿ, ಇತ್ತೀಚೆಗೆ ಕೋರ್ಟ್ ಚಿತ್ರದಲ್ಲಿ ಅದ್ಭುತ ಪ್ರದರ್ಶನ ನೀಡಿದ ಶಿವಾಜಿ ಖಳನಾಯಕನಾಗಿ ನಟಿಸುತ್ತಿದ್ದಾರೆ.

ಹೈಲೆಸ್ಸೋ ಎಂಬ ಶೀರ್ಷಿಕೆ ರೈತ ಸಮುದಾಯಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಹಳ್ಳಿಗಾಡಿನ ಪದಪ್ರಯೋಗದಿಂದ ತೆಗೆದುಕೊಳ್ಳಲಾಗಿದೆ. ಶೀರ್ಷಿಕೆಯ ಲೋಗೋವನ್ನು ಕ್ರಿಯೇಟಿವ್ ಆಗಿ ವಿನ್ಯಾಸಗೊಳಿಸಲಾಗಿದ್ದು, ಹಡಗಿನ ಆಕಾರದಲ್ಲಿ ಮಹಿಳೆಯ ಪಾದವು “S” ಅಕ್ಷರ ರೂಪದಲ್ಲಿ ತೋರುತ್ತದೆ. ಜೊತೆಗೆ, ಕೈಯಲ್ಲಿ ಆಯುಧ ಹಿಡಿದಿದ್ದು ಪೋಸ್ಟರ್ ಕೂತೂಹಲ ಮೂಡಿಸುವಂತಿದೆ.

ಸದ್ಯ ಈ ಸಿನಿಮಾ ಅದ್ದೂರಿಯಾಗಿ ಮಹೂರ್ತ ನಡೆಸಲಾಗಿದ್ದು, ಮಹೂರ್ತದಲ್ಲಿ ಸಾಕಷ್ಟು ಅತಿಥಿಗಳು ಭಾಗವಹಿಸಿದರು. ನಿಖಿಲ್ ಶೀರ್ಷಿಕೆಯನ್ನು ಅನಾವರಣಗೊಳಿಸಿದರು. ಬನ್ನಿ ವಾಸು ನಿರ್ಮಾಪಕರಿಗೆ ಸ್ಕ್ರಿಪ್ಟ್ ಹಸ್ತಾಂತರಿಸಿದರು. ನಿರ್ದೇಶಕರು ವಶಿಷ್ಟ, ಚಂದು ಮೋಂಡೇಟಿ, ಮೆಹರ್ ರಾಮೇಶ್ ಕ್ಯಾಮೆರಾವನ್ನು ಆನ್ ಮಾಡಿದರು. ವಿ.ವಿ. ವಿನಾಯಕ್ ಮುಹೂರ್ತ ಶಾಟ್‌ಗೆ ಕ್ಲಾಪ್ ನೀಡಿದರು. ನಿರ್ದೇಶಕ ಪ್ರಸನ್ನ ಕುಮಾರ್ ಸ್ವತಃ ಚಿತ್ರದ ಮೊದಲ ಶಾಟ್‌ಗೆ ಆಕ್ಷನ್ ಕಟ್ ಹೇಳಿದ್ರು.

ಈ ಚಿತ್ರದಲ್ಲಿ ನಾಯಕಿಯಾಗಿ ನಟಾಶಾ ಸಿಂಗ್ ಮತ್ತು ನಕ್ಷ ಸರನ್ ಕಾಣಿಸಿಕೊಳ್ಳಲಿದ್ದು, ಜನಪ್ರಿಯ ಕನ್ನಡ ನಟಿ ಅಕ್ಷರ ಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮೊಟ್ಟ ರಾಜೇಂದ್ರನ್, ಗೇಟಪ್ ಶ್ರೀನು, ಬೇವರ ದುಹಿತಾ ಸರಣ್ಯ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಚಿತ್ರದ ತಾಂತ್ರಿಕ ವಿಭಾಗವನ್ನೂ ಯುವ ಪ್ರತಿಭಾವಂತ ತಂಡವೇ ನೋಡಿಕೊಳ್ಳಲಿದೆ. ಅನುದೀಪ್ ದೇವ್ ಸಂಗೀತ ನೀಡಲಿದ್ದು, ಸುಜಾತಾ ಸಿದ್ದಾರ್ಥ್ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಚೋಟಾ ಕೆ. ಪ್ರಸಾದ್ ಎಡಿಟಿಂಗ್ ನೋಡಿಕೊಳ್ಳಲಿದ್ದಾರೆ. ಬ್ರಹ್ಮ ಕದಳಿ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ. ಚಿಂತಾ ಶ್ರೀನಿವಾಸ್ ರವರು ಬರೆದ ಕಥೆ ಇದಾಗಿದೆ. ಹೈ ಲೆಸ್ಸೋ ಸಿನಿಮಾ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಥಿಯೇಟ್ರಿಕಲ್ ರಿಲೀಸ್ ಆಗಲಿದೆ.
ಇದನ್ನೂ ಓದಿ : ಲೋಕಾಯುಕ್ತ ರೇಡ್ನಲ್ಲಿ ಎಸ್ಕೇಪ್ ಆಗಿದ್ದ ದೇವನಹಳ್ಳಿ PSI ಜಗದೇವಿ ಜಾಮೀನು ಅರ್ಜಿ ವಜಾ!







