ಬೆಂಗಳೂರು : ಹಿಂದಿನ ಸರ್ಕಾರಗಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ಹಾವಳಿ ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.

ನೀವು ವಿರೋಧ ಪಕ್ಷದ ನಾಯಕರಾಗಿದ್ದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೀರಿ. ಆದರೆ, ಹಿಂದಿನ ಸರ್ಕಾರಕ್ಕಿಂತ ಎಲ್ಲ ಇಲಾಖೆಗಳಲ್ಲೂ ಈಗ ಕಮಿಷನ್ ಡಬಲ್ ಆಗಿದೆ ಎಂದು ನಿಮ್ಮ ಗಮನಕ್ಕೆ ತರಲು ಸಂಘ ವಿಷಾದ ವ್ಯಕ್ತಪಡಿಸುತ್ತದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗುತ್ತಿಗೆದಾರರು ನಿರ್ವಹಿಸಿದ್ದ ಕಾಮಗಾರಿಗಳಿಗೆ ಬಾಕಿ ಹಣ ಬಿಡುಗಡೆ ಮಾಡುವುದು ಸೇರಿ ಇತರ ಸಮಸ್ಯೆ ಕುರಿತು 2 ವರ್ಷಗಳಿಂದ ನಿಮ್ಮ ಜೊತೆ ಚರ್ಚಿಸಿದ್ದೇವೆ. ಭ್ರಷ್ಟಾಚಾರ ವಿರುದ್ಧ ನಡೆಸಿದ್ದ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬರಲು ನೀವು ಕಾರಣರಾಗಿದ್ದೀರಿ. ಆದರೆ, ಪ್ರತಿ ಬಾರಿ ಪದಾಧಿಕಾರಿಗಳ ಜೊತೆ ನಡೆದಿದ್ದ ಸಭೆಯಲ್ಲಿ ಸಮಾದಾನ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೀರಿ. ಆದರೆ, ನಿಮ್ಮ ಆದೇಶಕ್ಕೆ ಅಧಿಕಾರಿಗಳು ಕಿಮ್ಮತ್ತು ಕೊಡುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಸಿಎಂಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಮೇಲಿನ ಭರವಸೆಯಿಂದ ಎಲ್ಲ ಜಿಲ್ಲೆಗಳ ಗುತ್ತಿಗೆದಾರರು ಸಮಾದಾನದಿಂದ ಇದ್ದಾರೆ. ಸಂಬಂಧಪಟ್ಟ ಇಲಾಖೆಗಳ ಸಚಿವರನ್ನು ಮತ್ತು ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡುವ ಬಗ್ಗೆ ಹಲವು ಬಾರಿ ಚರ್ಚಿಸಿದ್ದರೂ ಪ್ರಯೋಜನವಾಗಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಸೇರಿ 8 ಇಲಾಖೆಗಳಲ್ಲಿ ಯಾವುದೇ ಜೇಷ್ಠತೆ ಮತ್ತು ಪಾರದರ್ಶಕತೆ ಕಾಯ್ದೆ ಉಲ್ಲಂಘಿಸಿ, ಅವರವರ ಅನುಕೂಲಕ್ಕೆ ತಕ್ಕಂತೆ ಫಾರ್ಮಲಾ ರೂಪಿಸಿ ಬೇಕಾದವರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಸಾಕಷ್ಟು ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಹಿಂದಿನ ಸರ್ಕಾರಗಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ಹಾವಳಿ ಹೆಚ್ಚಾಗಿದೆ ಎಂದು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಮಾತನಾಡಿ, ಪೌರಾಡಳಿತ, ನಗರಾಭಿವೃದ್ಧಿ, ನಗರ ಯೋಜನೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶ ಉಲ್ಲಂಘಿಸಿ ಟೆಂಡರ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಪರಿವರ್ತಿಸಿ ತಮಗೆ ಬೇಕಾದ ಬಲಾಡ್ಯ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ. ಈ ವಿಚಾರ ಬಗ್ಗೆ ಚರ್ಚಿಸಲು ಸಂಬಂಧಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಏಷ್ಯಾಕಪ್‌ಗಾಗಿ ಇಂದು ಭಾರತ- ಪಾಕ್ ನಡುವೆ ಹೈವೋಲ್ಟೇಜ್ ಕದನ – 41 ವರ್ಷಗಳ ಇತಿಹಾಸಲ್ಲೇ ಫೈನಲ್‌ನಲ್ಲಿ ಮೊದಲ ಮುಖಾಮುಖಿ!







