ಬೆಂಗಳೂರು : ಪಾನಿಪೂರಿ ತಿನ್ನುತ್ತಿದ್ದಾಗ ಯುವಕರ ನಡುವೆ ಗಲಾಟೆ ನಡೆದು ಒಂದೇ ಪಂಚ್‌ಗೆ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯ ಬಳಿಯ ಅರಕೆರೆಯಲ್ಲಿ ನಡೆದಿದೆ. ಬಿಹಾರದ ಮೂಲದ ಭೀಮಕುಮಾರ್ (25) ಮೃತ ದುರ್ದೈವಿ.
ಭೀಮಕುಮಾರ್ ರ್ಯಾಪಿಡೋ ಬುಕ್ ಮಾಡಿ ಪಾನಿಪುರಿ ಅಂಗಡಿ ಬಳಿ ಕಾಯುತ್ತಿದ್ದ. ಈ ವೇಳೆ ಪಾನಿಪುರಿ ತಿನ್ನುತ್ತಿದ್ದ ಸಲ್ಮಾನ್ ಎಂಬಾತ ಅವಾಚ್ಯವಾಗಿ ನಿಂದಿಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಭೀಮಕುಮಾರ್ ಮತ್ತು ಸಲ್ಮಾನ್ ನಡುವೆ ಗಲಾಟೆ ನಡೆದಿದೆ. ಭೀಮಕುಮಾರ್ ಕುತ್ತಿಗೆಗೆ ಸಲ್ಮಾನ್ ಮುಷ್ಠಿಯಿಂದ ಬಲವಾಗಿ ಹೊಡೆದಿದ್ದ. ಈ ವೇಳೆ ಭೀಮಕುಮಾರ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಳಿಕ ಆತನನ್ನು ಸ್ನೇಹಿತರು ಮನೆಗೆ ಕರೆದೊಯ್ದಿದ್ದರು.

ಮೂರು ದಿನಗಳ ಕಾಲ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಭೀಮಕುಮಾರ್ ಇಂದು ಸಾವನ್ನಪ್ಪಿದ್ದಾನೆ. ಮೃತನ ಸ್ನೇಹಿತ ಅಂಜನ್ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪುಟ್ಟೇನಹಳ್ಳಿ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದು, ಈ ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ 5 ಕೋಟಿ ದೇಣಿಗೆ ನೀಡಿದ ಸಿಎಂ ಸಿದ್ದರಾಮಯ್ಯ!







