ಬೆಂಗಳೂರು : ಫೇಕ್ ಕೇಸ್ ಹಾಗೂ ಹಣಕ್ಕೆ ಡಿಮ್ಯಾಂಡ್ ಕೇಸಲ್ಲಿ ಇದೀಗ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುತ್ತುರಾಜ್ಗೆ ದೊಡ್ಡ ಕಂಟಕ ಎದುರಾಗಿದ್ದು, ಖಾಕಿ ತೊಟ್ಟ ಮುತ್ತುರಾಜ್ನ ಅಸಲಿ ಕಹಾನಿ ಇಂಚಿಂಚೂ ಬಯಲಾಗಿದೆ.

ಹೌದು.. ಸಿವಿಲ್ ಪ್ರಕರಣ ಒಂದರಲ್ಲಿ ಬಲವಂತವಾಗಿ ಕೇಸ್ ಜಡಿದಿದ್ದ ಇನ್ಸ್ಪೆಕ್ಟರ್ ಮುತ್ತುರಾಜ್, ಸಂಜಯ್ ಎಂಬವನ ಮೇಲೆ FIR ಮಾಡಿದ್ದರು. ಸಂಜಯ್ನ ಪ್ರಾಪರ್ಟಿಯನ್ನ ಕಬ್ಜಾ ಮಾಡೋಕೆ ಚೇತನ್ ಎಂಬಾತ ಸ್ಕೆಚ್ ಹಾಕಿದ್ದ. ಆತ ಆ ಜಾಗ ಕೊಡದೇ ಇದ್ದಾಗ ಕೊಲೆ ಬೆದರಿಕೆಯನ್ನ ಕೂಡ ಹಾಕಿದ್ದ. ಈ ಸಂಬಂಧ ಸಂಜಯ್ ಈಶಾನ್ಯ ವಿಭಾಗದ ಡಿಸಿಪಿಗೂ ದೂರನ್ನು ನೀಡಿದ್ದ. ಆದ್ರೆ, ಅದ್ಯಾವುದನ್ನೂ ಲೆಕ್ಕಿಸದೇ ಸುಖಾಸುಮ್ಮನೆ ಸಂಜಯ್ ಮೇಲೆ ಇನ್ಸ್ಪೆಕ್ಟರ್ ಮುತ್ತುರಾಜ್ FIR ದಾಖಲಿಸಿದ್ದರು. ಚೇತನ್ನ ಎಂಜಲು ಕಾಸಿಗೆ ಸಂಜಯ್ ಮೇಲೆ FIR ಹಾಕಿದ್ದಲ್ಲೇ, ಚೇತನ್ಗೆ ಜಾಗ ರಿಜಿಸ್ಟರ್ ಮಾಡಿಕೊಡ್ಬೇಕು, ಇಲ್ದೇ ಹೋದ್ರೆ ಬಿಡಲ್ಲ ಅಂತ ಸಂಜಯ್ಗೆ ಆವಾಜ್ ಹಾಕಿದ್ದರು.

ಇನ್ನೂ, ಇನ್ಸ್ಪೆಕ್ಟರ್ ಮುತ್ತುರಾಜ್ ಸಂಜಯ್ನನ್ನ ಫೇಕ್ ಕೇಸೊಂದರಲ್ಲಿ ಅರೆಸ್ಟ್ ಮಾಡಿ ಪೊಲೀಸ್ ಕಸ್ಟಡಿಗೂ ಪಡೆದಿದ್ದರಂತೆ. ನಂತರ ಸಂಜಯ್ ಕಸ್ಟಡಿಯಲ್ಲಿದ್ದಾಗ್ಲೇ ಆತನ ಸಹೋದರನ ಬಳಿ ಎರಡು ಲಕ್ಷ ಡೀಲ್ ಮಾಡಿದ್ದರು. ಮುತ್ತುರಾಜ್ನ ರೈಟ್ ಹ್ಯಾಂಡ್ ಆಗಿರೋ ರೈಟರ್ ನರಸಿಂಹಮೂರ್ತಿ ಈ ವ್ಯವಹಾರ ಕುದುರಿಸಿದ್ದು, ದೊಡ್ಡ ಸಾಹೇಬ್ರು ಅರ್ಥಾತ್ ಮುತ್ತು ಕಾಸ್ ಕೇಳ್ತಿದ್ದಾರೆ ಎಂದು ಸಂಜಯ್ ಸಹೋದರ ನಟೇಶನ ಬಳಿ 2 ಲಕ್ಷ ಪಡೆದಿದ್ದ. ಅಷ್ಟೇ ಅಲ್ಲದೆ, ಮುತ್ತುರಾಜ್ ಡೀಲಿಂಗ್ ಫ್ರೆಂಡ್ ಚೇತನ್ ಜೊತೆ ಮಾತಾಡ್ಕೊಂಡು ಕೇಸು ಮುಗಿಸ್ಕೊಳ್ಳಿ ಎಂದು ಹೆಡ್ ಕಾನ್ಸ್ಟೇಬಲ್ ನರಸಿಂಹಮೂರ್ತಿ ಪುಸಲಾಯಿಸಿದ್ದ. ಇನ್ನು, ಸಂಜಯ್ ರಿಲೀಸ್ ಆಗ್ತಿದ್ದಂತೆ ಮತ್ತೆ ನರಸಿಂಹಮೂರ್ತಿ ಆವಾಜ್ ಹಾಕಿ, ಹಣ ಕೊಟ್ಟಿದ್ದು ಯಾರತ್ರನಾದ್ರೂ ಹೇಳಿದ್ರೆ ಕೇಸು ರೀ-ಓಪನ್ ಆಗುತ್ತೆ ಎಂದು ಸಂಜಯ್ಗೆ ಬೆದರಿಸಿದ್ದ. ಈಗಲೂ ಈ ನರಸಿಂಹಮೂರ್ತಿ ಬ್ರೋಕರ್ ಕೆಲಸ ಮಾಡಿಕೊಂಡೇ ಸ್ಟೇಷನ್ನಲ್ಲಿ ಓಡಾಡ್ಕೊಂಡಿದ್ದಾನೆ.

ಸದ್ಯ ಫೇಕ್ ಕೇಸಲ್ಲಿ ಕಸ್ಟಡಿಗೆ ಪಡೆದು ಸಂಜಯ್ಗೆ ಚಿತ್ರಹಿಂಸೆ ಕೊಟ್ಟ ಇನ್ಸ್ಪೆಕ್ಟರ್ ಮುತ್ತುರಾಜ್ಗೆ ಸಾಡೇಸಾತಿ ಶುರುವಾಗಿದೆ. ಸಂಜಯ್ ಲೋಕಾಯುಕ್ತ ಅಧಿಕಾರಿಗಳಿಗೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಘಟನೆಯ ಕುರಿತು ದೂರನ್ನು ನೀಡಿದ್ದಾರೆ.

ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುತ್ತುರಾಜ್ ಈ ಹಿಂದೆ ಮಾಂಸ ದಂಧೆ ಕೇಸೊಂದರಲ್ಲಿ ಕೂಡ ತಗಲ್ಲಾಕ್ಕೊಂಡಿದ್ದರು. ಏರ್ಪೋರ್ಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಲ್ಲಾ ಲೆಕ್ಕಾಚಾರದಲ್ಲಿ ವೇಶ್ಯಾವಾಟಿಕೆ ನಡೆಸಲು ಪರ್ಮಿಷನ್ ಕೊಟ್ಟಿದ್ದರಂತೆ. ಇದೀಗ ಸ್ಕ್ರೀನ್ ಮುಂದೆ ಬಂದ್ರೆ ತಗಲ್ಲಾಕ್ಕೊಳ್ತೀನಿ ಅಂತ ಹೆಡ್ ಕಾನ್ಸ್ಟೇಬಲ್ ನರಸಿಂಹಮೂರ್ತಿಯನ್ನ ಮುಂದೆ ಬಿಟ್ಟಿದ್ದಾರೆ. ಫೇಕ್ ಕೇಸ್ ಹಾಗೂ ಹಣಕ್ಕೆ ಡಿಮಾಂಡ್ ಕೇಸಲ್ಲಿ ಇದೀಗ ಮುತ್ತುರಾಜ್ಗೆ ಭಾರೀ ಸಂಕಷ್ಟ ಎದುರಾಗಿದೆ. ಈ ಬಾರಿ ಮುತ್ತುರಾಜ್ ಕೊಡಿಗೇಹಳ್ಳಿಯಿಂದ ಗೇಟ್ ಪಾಸ್ ಪಡೆಯೋದು ಪಕ್ಕಾ ಎಂದು ಹೇಳಲಾಗಿದೆ.

ಇನ್ಸ್ಪೆಕ್ಟರ್ ಮುತ್ತುರಾಜ್ ಟೀಂನ ನರಸಿಂಹಮೂರ್ತಿಯ ವ್ಯವಹಾರದ ಆಡಿಯೋ BTVಗೆ ಲಭ್ಯವಾಗಿದ್ದು, ಲಂಚ ಪಡೆದಿರೋದನ್ನ ಎಲ್ಲೂ ಹೇಳ್ಬೇಡಪ್ಪ ಅನ್ನೋ ಸಂಜಯ್ ಜೊತೆ ಮಾತಾಡಿರೋ ಆಡಿಯೋನೂ ರಿವೀಲ್ ಆಗಿದೆ. ಈ ಆಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಕೂಡ್ಲೇ ಇನ್ಸ್ಪೆಕ್ಟರ್ ಮುತ್ತುರಾಜ್ಗೆ ಸಸ್ಪಂಡ್ ಶಿಕ್ಷೆ ನೀಡಿ ಎಂದು ಸಾರ್ವಜನಿಕರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಡಿಪಾರ್ಟ್ಮೆಂಟ್ ಎನ್ಕ್ವೇರಿಯನ್ನು ಕೂಡ ಮಾಡಿಸಿ, ಇಂತಹ ಖಾಕಿ ತೊಟ್ಟ ಲಂಚಬಾಕರನ್ನ ಜೈಲಿಗಟ್ಟಲೇಬೇಕು ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ : ಹಿಮಾಚಲ ಪ್ರದೇಶದಲ್ಲಿ ಮತ್ತೆ ಮೇಘಸ್ಫೋಟ.. ವಾಹನಗಳು, ಕೃಷಿ ಭೂಮಿಗೆ ಅಪಾರ ಹಾನಿ!







