ಮೈಸೂರು : ಸರ್ಕಾರದ ಹಣದ ಆಸೆಗಾಗಿ ಹೆಂಡ್ತಿಯೊಬ್ಬಳು ಕಟ್ಟಿಕೊಂಡ ಗಂಡನನ್ನೇ ಹತ್ಯೆಗೈದು ಅಡಿಕೆ ತೋಟದಲ್ಲಿ ಹೂತಿಟ್ಟ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರು ಗ್ರಾಮದ ಬಳಿ ನಡೆದಿದೆ. ವೆಂಕಟಸ್ವಾಮಿ (45) ಎಂಬುವವರನ್ನು ಪತ್ನಿ ಸಲ್ಲಾಪುರಿ (40) ಲಕ್ಷಗಟ್ಟಲೆ ಪರಿಹಾರದ ಆಸೆಗಾಗಿ ಕೊಲೆ ಮಾಡಿದ್ದಾಳೆ.

ಹುಲಿ ಹೊತ್ತೊಯ್ದಿದೆ ಎಂದು ಕಥೆ ಕಟ್ಟಿ ಊಟದಲ್ಲಿ ವಿಷ ಬೆರೆಸಿ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಮೃತದೇಹವನ್ನು ತೋಟದ ಸಮೀಪದ ತಿಪ್ಪೆಯಲ್ಲಿ ಒಬ್ಬಳೇ ಹೂತಿಟ್ಟಿದ್ದಳು. ಈ ದಂಪತಿ ಮಂಡ್ಯ ಜಿಲ್ಲೆ ಹಲಗೂರು ಸಮೀಪದ ಕದಂಪುರ ಗ್ರಾಮದವರಾಗಿದ್ದು, ಪತಿ ನಾಪತ್ತೆಯಾಗಿದ್ದಾರೆ ಎಂದು ಹೆಂಡ್ತಿ ಸಲ್ಲಾಪುರಿ ಪೊಲೀಸರಿಗೆ ದೂರು ನೀಡಿದ್ದಳು. ಹುಲಿ ಹೊತ್ತೊಯ್ದಿದೆ ಎಂದು ಆಕೆ ಕಥೆ ಹೇಳಿದ ಕಾರಣ, ಪೊಲೀಸರು, ಅರಣ್ಯ ಮತ್ತು ಗ್ರಾ.ಪಂ. ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ, ಮೃತದೇಹವನ್ನು ಎಳೆದೊಯ್ದ ಜಾಡು ಹಿಡಿದ ಪೊಲೀಸರಿಗೆ ತಿಪ್ಪೆಗುಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸಂದೇಹಗೊಂಡು ಪೊಲೀಸರು ಸಲ್ಲಾಪುರಿಯನ್ನು ತೀವ್ರವಾಗಿ ವಿಚಾರಣೆ ಮಾಡಿದಾಗ, ಐಷಾರಾಮಿ ಜೀವನದ ಆಸೆಗಾಗಿ ಮತ್ತು ಹುಲಿ ಹತ್ಯೆಗೈದರೆ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂಬ ದುರಾಸೆಯಿಂದ ಈ ಕೃತ್ಯ ಎಸಗಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಹುಣಸೂರು ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಸಿನಿ ಪ್ರಿಯರಿಗೆ ಗುಡ್ನ್ಯೂಸ್.. ಮಲ್ಟಿಪ್ಲೆಕ್ಸ್ ಸೇರಿ ಎಲ್ಲ ಥಿಯೇಟರ್ಗಳಲ್ಲಿ 200 ರೂ. ಏಕರೂಪ ಟಿಕೆಟ್ ದರ ಜಾರಿ!







