ಮೈಸೂರು : ರಾಜ್ಯ ಸರ್ಕಾರವು ಸೆ.22ರಿಂದ ಅ.7ರವರೆಗೆ 15 ದಿನಗಳ ಕಾಲ ಹೊಸ ಸಾಮಾಜಿಕ-ಶೈಕ್ಷಣಿಕ ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿದ್ದು, ಸಮುದಾಯದವರು ಕಡ್ಡಾಯವಾಗಿ ಒಕ್ಕಲಿಗ ಎಂದು ನಮೂದಿಸಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮನವಿ ಮಾಡಿದ್ದಾರೆ.
ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜನಾಂಗದ ಜಾತಿಗಣತಿ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, 1931ರಲ್ಲಿ ನಡೆದಿದ್ದ ಸಾಮಾಜಿಕ, ಶೈಕ್ಷಣಿಕ ಜಾತಿಗಣತಿ ಸಮೀಕ್ಷೆಯು ಈಗ ನಡೆಯುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಒಕ್ಕಲಿಗರ ಜನಸಂಖ್ಯೆಯನ್ನು ನಿಖರವಾಗಿ ಲೆಕ್ಕ ಹಾಕಲು ಯಾವುದೇ ಗಣತಿದಾರರು ಬಂದಾಗ, ಉಪ ಪಂಗಡಕ್ಕೆ ಸೇರಿದ್ದರೂ ಜಾತಿ ಕಲಂನಲ್ಲಿ ಒಕ್ಕಲಿಗ ಎಂದು ಬರೆಸಬೇಕು. ಉಪ ಪಂಗಡಗಳನ್ನು ಉಪ ಜಾತಿ ಕಲಂನಲ್ಲಿ ದಾಖಲಿಸಬೇಕು. ಜಾತಿ ಕಲಂನಲ್ಲಿ ಯಾರೂ ಉಪ ಜಾತಿ ನಮೂದಿಸಬಾರದು. ಹಾಗೇಯೇ ನಿಮ್ಮ ಸರಿಯಾದ ವಿದ್ಯಾಭ್ಯಾಸ, ಜಮೀನು, ಆರ್ಥಿಕ ಸ್ಥಿತಿಗಳ ಮಾಹಿತಿ ನೀಡಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.
ಒಕ್ಕಲಿಗರು ಹಿಂದೆ ಆಶ್ರಯ ಹಾಗೂ ಅನ್ನದಾತರಾಗಿದ್ದರು. ಆಗ ಎಲ್ಲರೂ ಒಗ್ಗಟ್ಟಾಗಿದ್ದು ಸಮಾಜದ ಏಳಿಗೆಗೆ ದುಡಿಯುತ್ತಿದ್ದರು. ಆದರೆ ಈಗ ಒಕ್ಕಲಿಗರಲ್ಲಿ ಒಗ್ಗಟ್ಟು ಇಲ್ಲವಾಗಿದೆ. ನಾವು ಮತ್ತು ನಮ್ಮ ಸಮಾಜ ಉಳಿಯ ಬೇಕಾದರೆ ಒಕ್ಕಲಿಗರು ಒಗ್ಗಟಾಗಿರಬೇಕು. ಸಮುದಾಯಕ್ಕೆ ಧಕ್ಕೆ ಬೇಕಾದ ಮೀಸಲಾತಿಸಿಗಬೇಕು. ಆಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಈಗ ಆಕಾಲ ಕೂಡಿ ಬಂದಿದೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಕಲ್ಲು ತೂರಾಟ ಕೇಸ್ - ಕರ್ತವ್ಯ ಲೋಪದಡಿ ಮದ್ದೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಸಸ್ಪೆಂಡ್!







