ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆಗಳ ದಂಡ ಪಾವತಿಗೆ ಪೊಲೀಸ್ ಇಲಾಖೆ ನೀಡಿದ್ದ ಶೇ.50ರ ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಕೇವಲ 21 ದಿನಗಳಲ್ಲಿ ಬರೋಬ್ಬರಿ 80 ಕೋಟಿಗೂ ಹೆಚ್ಚು ದಂಡ ಸಂಗ್ರಹವಾಗಿದೆ. ಈ ರಿಯಾಯಿತಿಯು ಇಂದೇ ಕೊನೆಗೊಳ್ಳಲಿದೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬಾಕಿ ಉಳಿಸಿಕೊಂಡಿದ್ದ ದಂಡ ಪಾವತಿಸಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಪೊಲೀಸ್ ಇಲಾಖೆ ಶೇ.50ರ ರಿಯಾಯಿತಿ ಘೋಷಿಸಿತ್ತು. ಈ ಅವಕಾಶವನ್ನು ಬಳಸಿಕೊಂಡ ಸಾರ್ವಜನಿಕರು ದಂಡ ಪಾವತಿಗೆ ಮುಗಿಬಿದ್ದಿದ್ದಾರೆ.
ಕಳೆದ 21 ದಿನಗಳಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 28,84,114 ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ಮೂಲಕ ಇದುವರೆಗೆ ₹80,78,75,350 ರೂಪಾಯಿ ದಂಡ ಸಂಗ್ರಹವಾಗಿದೆ. ಈ ಬೃಹತ್ ಮೊತ್ತವು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಬಿಂಬಿಸುತ್ತದೆ.
ದಂಡದ ಮೊತ್ತ ಅರ್ಧದಷ್ಟು ಕಡಿಮೆಗೊಂಡಿದ್ದರಿಂದ ವಾಹನ ಸವಾರರು ತಮ್ಮ ಬಾಕಿ ದಂಡವನ್ನು ಪಾವತಿಸಲು ಹೆಚ್ಚು ಆಸಕ್ತಿ ತೋರಿದ್ದಾರೆ. ಈ ರಿಯಾಯಿತಿ ಅವಕಾಶ ಇಂದೇ ಕೊನೆಯ ದಿನವಾಗಿದ್ದು, ದಂಡ ಬಾಕಿ ಉಳಿಸಿಕೊಂಡಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಕೆಜಿ ಚಿನ್ನ ಕದ್ದ ಸೂರ್ಯನಗರ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್!







