ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಓಡಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದೆ. ದುಬೈನಲ್ಲಿ ನಡೆಯುತ್ತಿರುವ ರೇಸ್‌ನಲ್ಲಿ ಭಾಗವಹಿಸಲು ಅಭ್ಯಾಸ ಮಾಡುವ ವೇಳೆ ಅಜಿತ್ ಕುಮಾರ್ ಓಡಿಸುತ್ತಿದ್ದ ಕಾರು 180 ಕಿಮೀ ವೇಗದಲ್ಲಿ ಬಂದು ರೇಸ್ ಟ್ರಾಕ್ ಪಕ್ಕದಲ್ಲಿದ್ದ ತಡೆಗೋಡೆಗೆ ಅಪ್ಪಳಿಸಿದೆ. ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಅಜಿತ್ ಕುಮಾರ್ ಓಡಿಸುತ್ತಿದ್ದ ಕಾರು ತಡೆಗೋಡೆಗೆ ಅಪ್ಪಳಿಸುವ ವಿಡಿಯೋವನ್ನು ಅವರ ತಂಡವು ಬಿಡುಗಡೆ ಮಾಡಿದ್ದು, ಗೋಡೆಗೆ ಅಪ್ಪಳಿಸಿದ ಕಾರು ಆರು-ಏಳು ಬಾರಿ ತಿರುಗಿ ಕೆಳಗೆ ಬಿದ್ದಿದ್ದು, ತಕ್ಷಣವೇ ಕಾರಿನಲ್ಲಿದ್ದ ಅಜಿತ್ ಅವರನ್ನು ರಕ್ಷಣೆ ಮಾಡಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಜಿತ್ ಕುಮಾರ್ ಮ್ಯಾನೇಜರ್ ಸುರೇಶ್ ಚಂದ್ರ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಘಟನೆಯಲ್ಲಿ ಅಜಿತ್ ಅವರಿಗೆ ಯಾವುದೇ ಗಾಯವಾಗಿಲ್ಲ, ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
24H ದುಬೈ 2025 ಕಾರು ರೇಸ್‌ನಲ್ಲಿ ಭಾಗಿಯಾಗಲು ನಟ ಅಜಿತ್ ತೆರಳಿದ್ದರು. ಅಭ್ಯಾಸ ನಡೆಸುವಾಗ ರೇಸ್ ಕಾರು ಕಂಟ್ರೋಲ್ ಕಳೆದುಕೊಂಡು ಪಕ್ಕದ ತಡೆಗೋಡೆಗೆ ಅಪ್ಪಳಿಸಿದೆ. ಘಟನೆಯಿಂದ ಕಾರಿನ ಮುಂಬಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಜಿತ್ ಕುಮಾರ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಅಪಘಾತದ ವಿಚಾರ ತಿಳಿದು ಆತಂಕಗೊಂಡಿದ್ದರು. ಆದರೆ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ, ಅಜಿತ್‌ಗೆ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ತಿಳಿದು ನಿರಾಳರಾಗಿದ್ದಾರೆ.
ನಟ ಅಜಿತ್ ಅವರು ದೊಡ್ಡ ಸಾಹಸಿ ಕೂಡ ಹೌದು. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಕಾರುಗಳ ಬಗ್ಗೆ ಅವರಿಗೆ ವಿಶೇಷವಾದ ಕ್ರೇಜ್ ಇದೆ. ಅದರಲ್ಲೂ ಕಾರ್ ರೇಸ್ ಮತ್ತು ಬೈಕ್ ರೇಸ್ ಎಂದರೆ ಅವರಿಗೆ ಸಖತ್ ಇಷ್ಟ.
ಇದನ್ನೂ ಓದಿ : ‘ಅಭಿನಯ ಶಾರದೆ’ ಜಯಂತಿ ಹೆಸರಲ್ಲಿ ಪ್ರಶಸ್ತಿಗೆ ಚಿಂತನೆ – ಸಿಎಂ ಸಿದ್ದರಾಮಯ್ಯ ಭರವಸೆ..!