ಭಾರತದಲ್ಲಿ ದಿಢೀರ್​ ಗಗನಕ್ಕೇರಿದ ಚಿನ್ನದ ಬೆಲೆ.. ಪ್ರತಿ ಗ್ರಾಂಗೆ 8,500 ರೂ.. ಬೆಂಗಳೂರಿನಲ್ಲಿ ಎಷ್ಟಿದೆ?

ಹೊಸದಿಲ್ಲಿ : ಭಾರತದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಲೇ ಇದೆ. ಷೇರುಪೇಟೆ ಕುಸಿತದ ಹಾದಿಯಲ್ಲಿದ್ದರೆ, ಬಂಗಾರದ ಬೆಲೆ ಏರುಗತಿಯಲ್ಲಿದೆ. ಸೋಮವಾರ ದೆಹಲಿಯಲ್ಲಿ ಬಂಗಾರದ ಬೆಲೆ ದಾಖಲೆ ನಿರ್ಮಿಸಿದೆ. ಶುದ್ಧ ಚಿನ್ನದ (24 ಕ್ಯಾರೆಟ್‌) ಬೆಲೆ 10 ಗ್ರಾಂಗೆ 2,430 ರೂ. ಜಿಗಿದು, 88,500 ರೂ. ತಲುಪಿದೆ. 22 ಕ್ಯಾರೆಟ್‌ ಚಿನ್ನದ ಬೆಲೆ ಕೂಡ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ, 88,100 ರೂ. ಮುಟ್ಟಿದೆ. ಇದು ಇದುವರೆಗಿನ ಸರ್ವಕಾಲಿಕ ಗರಿಷ್ಠ ಏರಿಕೆಯಾಗಿದೆ. ಬಂಗಾರದ ಜತೆ ಪೈಪೋಟಿಗೆ ಬಿದ್ದಂತೆ ಬೆಳ್ಳಿ ಬೆಲೆ ಸಹ ಕೆ.ಜಿ.ಗೆ 1,000 ರೂ. ಹೆಚ್ಚಳವಾಗಿ 97,500 ರೂ. ತಲುಪಿದೆ.

ಕಳೆದ ನಾಲ್ಕು ದಿನಗಳಿಂದ ಷೇರುಪೇಟೆ ಕುಸಿತದ ಹಾದಿಯಲ್ಲಿದೆ. ಹೀಗಾಗಿ ಹೂಡಿಕೆದಾರರ ಗಮನವೀಗ ಬಂಗಾರದ ಮೇಲೆ ಹರಿದಿದೆ. ಮುಂದಿನ ದಿನಗಳಲ್ಲಿಇದರ ಸುಳಿವು ಅರಿತ ಆಭರಣ ವ್ಯಾಪಾರಿಗಳು ಮತ್ತು ಗ್ರಾಹಕರು ಚಿನ್ನ ಖರೀದಿಗೆ ಮುಗಿಬಿದ್ದಿದ್ದಾರೆ. ಇದರಿಂದ ಇದರ ಬೆಲೆ ಏರುಗತಿಯಲ್ಲಿ ಸಾಗಿದೆ.

ಬೆಂಗಳೂರಿನಲ್ಲಿ ಎಷ್ಟು? ಬೆಂಗಳೂರಿನಲ್ಲಿಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 390 ರೂ. ಏರಿ, 87,060 ರೂ. ಆಗಿದೆ, ಆಭರಣ ಚಿನ್ನದ ಬೆಲೆ 10 ಗ್ರಾಂಗೆ 350 ರೂ. ಹೆಚ್ಚಳವಾಗಿ, 79,800 ರೂ. ಆಗಿದೆ. ಬೆಳ್ಳಿ ಬೆಲೆ ಗ್ರಾಂಗೆ 99.50 ರೂ. ಏರಿ. ಕೆ.ಜಿ ಬೆಳ್ಳಿ ಬೆಲೆ 99,500 ರೂ. ಆಗಿದೆ.

ಇನ್ನು ಅಮೆರಿಕದ ಸುಂಕ ನೀತಿಯಿಂದ ಈಗ ಎಲ್ಲರ ಗಮನ ಚಿನ್ನದತ್ತ ನೆಟ್ಟಿದ್ದು, ಪರಿಣಾಮ ಜಾಗತಿಕವಾಗಿ ಕೂಡ ಚಿನ್ನದ ಬೆಲೆ ಏರುಮುಖಿಯಾಗಿದೆ. ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,900 ಡಾಲರ್‌ ಇದೆ. ಇದು ಕೆಲವೇ ದಿನಗಳಲ್ಲಿ 2,910 ಡಾಲರ್‌ ಮಟ್ಟಕ್ಕೆ ಮುಟ್ಟಬಹುದು ಎಂದು ಹೂಡಿಕೆ ತಜ್ಞರು ಅಂದಾಜು ಮಾಡಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈಕ್ವಿಟಿ ಹೂಡಿಕೆಗಳಿಂದ ಭಾರಿ ಪ್ರಮಾಣದ ಬಂಡವಾಳವನ್ನು ವಾಪಸ್‌ ತೆಗೆಯುತ್ತಿದ್ದು, ಅವರೀಗ ಚಿನ್ನದ ಮೇಲೆ ಹೂಡಿಕೆ ಮಾಡ ತೊಡಗಿದ್ದಾರೆ. ಈ ಎಲ್ಲಅಂಶಗಳು ಸುವರ್ಣದ ದರಗಳನ್ನು ಏರಿಸತೊಡಗಿವೆ.

Btv Kannada
Author: Btv Kannada

Leave a Comment

Read More