ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದಿದ್ದು ಅಭಿಮಾನಿಗಳಿಗೆ ಸಂತಸ ನೀಡಿದೆ. ಈ ಗೆಲುವಿನ ಸಂಭ್ರಮಾಚರಣೆಯೂ ಜೋರಾಗಿ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಆರ್ಸಿಬಿ ಅಭಿಮಾನಿಗಳು ಒಂದು ವಿಚಾರಕ್ಕೆ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ನಟಿ ರಶ್ಮಿಕಾ ಮಂದಣ್ಣ! ಅರೆ, ನಟಿ ರಶ್ಮಿಕಾ ಮಂದಣ್ಣ ಅವರಿಗೂ ಆರ್ಸಿಬಿ ತಂಡಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.
ವಿಷಯ ಏನೆಂದರೆ, ಐಪಿಎಲ್ ಆರಂಭಕ್ಕೂ ಮುನ್ನ ಅನೇಕ ಸೆಲೆಬ್ರಿಟಿಗಳ ಜೊತೆ ಆರ್ಸಿಬಿ ಸಹಯೋಗ ಮಾಡಿಕೊಂಡಿದೆ. ರಶ್ಮಿಕಾ ಮಂದಣ್ಣ ಜೊತೆ ಆರ್ಸಿಬಿ ಮ್ಯಾನೇಜ್ಮೆಂಟ್ ಕೈ ಜೋಡಿಸಿರುವುದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ‘ಇದು ಆರ್ಸಿಬಿ ತೆಗೆದುಕೊಂಡ ಅತಿ ಕೆಟ್ಟ ನಿರ್ಧಾರ’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಈಗಾಗಲೇ ಶಿವರಾಜ್ಕುಮಾರ್, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್, ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂತಾದ ಸೆಲೆಬ್ರಿಟಿಗಳು ಆರ್ಸಿಬಿ ಅನ್ಬಾಕ್ಸ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸ್ಟಾರ್ ಕಲಾವಿದರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಜೊತೆ ಕೈ ಜೋಡಿಸಿದ್ದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಸ್ಟಾರ್ಗಳ ಪ್ರೋಮೋಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ರಶ್ಮಿಕಾ ಮಂದಣ್ಣ ಅವರನ್ನು ಅನ್ಬಾಕ್ಸ್ ವಿಡಿಯೋದಲ್ಲಿ ನೋಡಿದ ಆರ್ಸಿಬಿ ಫ್ಯಾನ್ಸ್ಗೆ ನಿರಾಸೆ ಆಗಿದೆ.
‘ನಾವು ಈ ಸಹಯೋಗವನ್ನು ನಿರೀಕ್ಷಿಸಿರಲಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ನಿಯತ್ತಾದ ಫ್ರಾಂಚೈಸ್ಗೆ ನಿಯತ್ತಿಲ್ಲದ ವ್ಯಕ್ತಿಗಳ ಸಹಯೋಗ ಬೇಡ’ ಎಂಬ ಕಮೆಂಟ್ ಕೂಡ ಬಂದಿದೆ. ‘ಕರ್ನಾಟಕಕ್ಕೆ ರಶ್ಮಿಕಾ ಮಂದಣ್ಣ ಬೇಡ. ಸ್ಮೃತಿ ಮಂಧಾನ ಬೇಕು’ ಎಂದು ಕೂಡ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ‘ಅಷ್ಟು ಸಿಹಿ ಮನುಷ್ಯರ ಮಧ್ಯೆ ಈ ಕಹಿ ಯಾಕೆ’ ಎಂದು ಟ್ರೋಲ್ ಪೇಜ್ನವರು ಖಾರವಾಗಿ ಕಮೆಂಟ್ ಮಾಡಿದ್ದಾರೆ. ಆರ್ಸಿಬಿ ಫ್ರಾಂಚೈಸಿಯ ಒಂದು ನಡೆ ಇದೀಗ ಅಭಿಮಾನಿಗಳು ಕೆರಳುವಂತೆ ಮಾಡಿದೆ.
ತುಂಬಾ ವರ್ಷಗಳಿಂದ ಅಭಿಮಾನಿಗಳು ಆರ್ ಸಿಬಿ ಹೆಸರನ್ನು ಬದಲಿಸುವಂತೆ ಒತ್ತಾಯಿಸುತ್ತಾ ಬಂದಿದ್ದರು. ಅದಕ್ಕೆ ಪ್ರತಿಯಾಗಿ ಫ್ರಾಂಚೈಸಿ ಸಹ ಇದೀಗ ಇಂಗ್ಲಿಷ್ ನಲ್ಲಿ (Royal Challengers Bangalore) ಬದಲಿಗೆ (Royal Challengers Bengaluru) ಮಾಡಲು ಉದ್ದೇಶಿಸಿದೆ.
ರಶ್ಮಿಕಾ ಮಂದಣ್ಣ ವಿರುದ್ದ ನೆಟ್ಟಿಗರು ಗರಂ ಆಗಿರುವುದೇಕೆ? ರಶ್ಮಿಕಾ ಮಂದಣ್ಣ ಅವರು ಕನ್ನಡದವರು. ಅವರಿಗೆ ಖ್ಯಾತಿ ಸಿಕ್ಕಿದ್ದು ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ. ಆ ಚಿತ್ರದಲ್ಲಿ ನಟಿಸಿದ ಬಳಿಕ ರಶ್ಮಿಕಾ ಮಂದಣ್ಣ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಖ್ಯಾತಿಗಳಿಸಿದ್ದರು. ಆ ಸಮಯಕ್ಕೆ ಸರಿಯಾಗಿ ರಶ್ಮಿಕಾ ಅವರಿಗೆ ಪರಭಾಷೆಯಲ್ಲಿ ಅವಕಾಶಗಳು ಹೆಚ್ಚಿದವು. ಕನ್ನಡದಲ್ಲಿ ಅವರು ನಟಿಸುವುದು ಕಡಿಮೆ ಮಾಡಿದ್ದರು. ಇದಕ್ಕೆ ನೆಟ್ಟಿಗರು ಅಂದಿನಿಂದಲೇ ಅಕ್ರೋಶ ಹೊರಹಾಕುತ್ತಾ ಬಂದಿದ್ದಾರೆ. ಈಗ ಅವರ ಜೊತೆ ಕೈ ಜೋಡಿಸಿದ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಚುನಾವಣಾಧಿಕಾರಿಗಳಿಗೆ ಬೇಕಿದೆ 1700 ವೆಹಿಕಲ್ಸ್ : ವಾಹನಗಳಿಗೆ ಫುಲ್ ಡಿಮ್ಯಾಂಡ್..!