ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ವಿರುದ್ಧ ಆರೋಪಗಳು ಎದುರಾಗಿರುವಂತಹ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸೈಟು ಹಂಚಿಕೆ ಅಕ್ರಮದ ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ವಹಿಸಬೇಕಾದ್ದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ (ಫೆ.7) ತೀರ್ಪು ನೀಡಿದೆ. ಇದರೊಂದಿಗೆ ಸಿಎಂ ವಿರುದ್ಧದ ಮುಡಾ ತನಿಖೆ ಸಿಬಿಐಗೆ ವಹಿಸುವಂತೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸ್ನೇಹಮಯಿ ಕೃಷ್ಣ ಅವರು, ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯಿಂದ ಸ್ನೇಹಮಯಿ ಕೃಷ್ಣ ಹಿಂದೆ ಸರಿದಿದ್ದಾರೆ. ಈ ಕುರಿತು ಅವರೇ ಸ್ಪಷ್ಟನೆ ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ಹೇಳೀದ್ದೇನು? ‘ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮತ್ತಷ್ಟು ಕಾಲ ವಿಳಂಬ ಮಾಡುವ ಮಾಡುವ ಬದಲು, ಲೋಕಾಯುಕ್ತ ಅಧಿಕಾರಿಗಳು ಏನೇ ವರದಿ ಸಲ್ಲಿಸಿದರೂ ಸಹ, ನನ್ನ ಬಳಿ ಇರುವ ಮತ್ತು ಲಭ್ಯವಾಗುವ ಸಾಕ್ಷ್ಯಾಧಾರಗಳನ್ನು ಆಧರಿಸಿ, ಮಾನ್ಯ ನ್ಯಾಯಾಲಯದಲ್ಲಿ ನಾನು ಮಾಡಿರುವ ಆರೋಪವನ್ನು ಸಾಬೀತು ಪಡಿಸಿ, ಆರೋಪಿತರಿಗೆ ಶಿಕ್ಷೆ ಕೊಡಿಸಬಹುದು ಎಂಬ ವಿಶ್ವಾಸ ಮೂಡಿದೆ.

ಹೀಗಾಗಿ ವಕೀಲರ ಪರೋಕ್ಷ ಸಹಕಾರ ಪಡೆದುಕೊಂಡು, ಅವಶ್ಯಕತೆ ಬಿದ್ದರೆ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಕ್ಕನ್ನು ಉಳಿಸಿಕೊಂಡು, ಖುದ್ದಾಗಿ ನಾನೇ (party in person) ಮಾನ್ಯ ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿ, ವಾದ ಮಂಡನೆ ಮಾಡಿ, ನಾನು ಮಾಡಿರುವ ಆರೋಪವನ್ನು ಸಾಬೀತು ಪಡಿಸಿ, ಆದಷ್ಟು ಬೇಗ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ನಿರ್ಧರಿಸಿದ್ದೇನೆ ಎಂದು ತಮ್ಮ ಫೇಸ್ಬುಕ್ ಖಾತೆಯೆಲ್ಲಿ ಬರೆದುಕೊಂಡಿದ್ದಾರೆ.
ಸ್ನೇಹಮಯಿ ಕೃಷ್ಣ ಫೇಸ್ಬುಕ್ ಪೋಸ್ಟ್ನಲ್ಲಿ ಏನಿದೆ? ಎಲ್ಲಾ ಮಾದ್ಯಮ ಮಿತ್ರರಿಗೆ/ಹಿತೈಷಿಗಳಿಗೆ ನಮಸ್ಕಾರಗಳು, ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನನಗೆ ತಾವೆಲ್ಲರೂ ಪ್ರಶ್ನೆ ಮಾಡುತ್ತಿದ್ದದ್ದು ಸರಿಯಷ್ಟೆ. ಮಾನ್ಯ ಉಚ್ಚ ನ್ಯಾಯಾಲಯವು ನನ್ನ ಅರ್ಜಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಅಂಶಗಳನ್ನು ಓದಿದ ನಂತರ ಎರಡು ದಿನಗಳ ಕಾಲ ಚಿಂತನೆ ನಡೆಸಿ, ನನ್ನ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ, ನನ್ನ ಕೆಲವು ಆತ್ಮೀಯ ವಕೀಲರೊಂದಿಗೆ-ಹಿತೈಷಿಗಳೊಂದಿಗೆ ಚರ್ಚೆ ನಡೆಸಿ, ನನ್ನ ಇದುವರೆಗಿನ ಕಾನೂನು ಹೋರಾಟದ ಅನುಭವವನ್ನು ಆಧರಿಸಿ ಒಂದು ನಿರ್ಧಾರಕ್ಕೆ ಬಂದಿರುತ್ತೇನೆ, ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮತ್ತಷ್ಟು ಕಾಲ ವಿಳಂಬ ಮಾಡುವ ಬದಲು, ಲೋಕಾಯುಕ್ತ ಅಧಿಕಾರಿಗಳು ಏನೇ ವರದಿ ಸಲ್ಲಿಸಿದರೂ ಸಹ, ನನ್ನ ಬಳಿ ಇರುವ ಮತ್ತು ಲಭ್ಯವಾಗುವ ಸಾಕ್ಷ್ಯಾಧಾರಗಳನ್ನು ಆಧರಿಸಿ, ಮಾನ್ಯ ನ್ಯಾಯಾಲಯದಲ್ಲಿ ನಾನು ಮಾಡಿರುವ ಆರೋಪವನ್ನು ಸಾಬೀತು ಪಡಿಸಿ, ಆರೋಪಿತರಿಗೆ ಶಿಕ್ಷೆ ಕೊಡಿಸಬಹುದು ಎಂಬ ವಿಶ್ವಾಸ ಮೂಡಿದ್ದರಿಂದ, ವಕೀಲರ ಪರೋಕ್ಷ ಸಹಕಾರ ಪಡೆದುಕೊಂಡು, ಅವಶ್ಯಕತೆ ಬಿದ್ದರೆ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಕ್ಕನ್ನು ಉಳಿಸಿಕೊಂಡು, ಖುದ್ದಾಗಿ ನಾನೇ (party in person) ಮಾನ್ಯ ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿ, ವಾದ ಮಂಡನೆ ಮಾಡಿ, ನಾನು ಮಾಡಿರುವ ಆರೋಪವನ್ನು ಸಾಬೀತು ಪಡಿಸಿ, ಆದಷ್ಟು ಬೇಗ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.









