ರೋಹಿತ್ ಶತಕದಾಟಕ್ಕೆ ಆಂಗ್ಲರು ಶೇಕ್ – 2ನೇ ಏಕದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ!

ಕಟಕ್​ನ ಬಾರಾಬತಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್​ಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ಇನ್ನು ಒಂದು ಪಂದ್ಯ ಇರುವಂತೆಯೇ 3 ಪಂದ್ಯಗಳ ಸರಣಿಯನ್ನ ವಶಪಡಿಸಿಕೊಂಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಭಾರತಕ್ಕೆ 305ರನ್​ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ರೋಹಿತ್ ಪಡೆ 44.3 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಚೇಸ್ ಮಾಡಿ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ 90 ಎಸೆತಗಳಲ್ಲಿ 119 ರನ್​ಗಳಿಸಿ ಗೆಲುವಿನ ರೂವಾರಿಯಾಗಿದ್ದಾರೆ. ಹಾಗೆಯೇ ಟ್ರೊಲರ್ಸ್​ಗಳ ಬಾಯಿ ಮುಚ್ಚಿಸಿದ್ದಾರೆ.

ಇಂಗ್ಲೆಂಡ್ ನೀಡಿದ 305ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ, ಉಪನಾಯಕ ಶುಭ್​ಮನ್ ಗಿಲ್​ ಅದ್ಭುತ ಆರಂಭ ನೀಡಿದರು. ಈ ಇಬ್ಬರು ಮೊದಲ ವಿಕೆಟ್​ಗೆ 100 ಎಸೆತಗಳಲ್ಲಿ 136 ರನ್​ಗಳ ಜೊತೆಯಾಟ ನೀಡಿದರು. ಗಿಲ್​ 52 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ 60 ರನ್​ ಸಿಡಿಸಿ ಔಟ್ ಆದರು. ನಂತರ ಬಂದ ಕೊಹ್ಲಿ ಕೇವಲ 5 ರನ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಆದರೆ 3ನೇ ವಿಕೆಟ್​ಗೆ ಒಂದಾದ ಶ್ರೇಯಸ್​ ಅಯ್ಯರ್ ಜೊತೆ ನಾಯಕ ರೋಹಿತ್ 61 ಎಸೆತಗಳಲ್ಲಿ 70 ರನ್​ಗಳ ಜೊತೆಯಾಟ ನೀಡಿದರು. 90 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 7 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 119 ರನ್​ಗಳಿಸಿ ಔಟ್ ಆದರು. ಅಕ್ಷರ್​ ಪಟೇಲ್ ಜೊತೆ ಸೇರಿದ ಅಯ್ಯರ್ 4ನೇ ವಿಕೆಟ್​ಗೆ 38 ರನ್​ ಸೇರಿಸಿದರು. 47 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 44 ರನ್​ಗಳಿಸಿದರು.

ಆ ನಂತರ ಬಂದ ಕೆಎಲ್ ರಾಹುಲ್ (10) ಹಾಗೂ ಹಾರ್ದಿಕ್ ಪಾಂಡ್ಯ (10) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ 43 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 41 ರನ್​ಗಳಿಸಿ ಹಾಗೂ ರವೀಂದ್ರ ಜಡೇಜಾ ಅಜೇಯ 11 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

Btv Kannada
Author: Btv Kannada

Leave a Comment

Read More