ಬೆಂಗಳೂರು : ಸ್ಯಾಂಡಲ್ವುಡ್ನ ಬಿಗ್ ಹಿಟ್ ಸಿನಿಮಾ ಡೆಡ್ಲಿ ಸೋಮ, ಮಾದೇಶ ಖ್ಯಾತಿಯ ರವಿ ಶ್ರೀವತ್ಸ ಅವರ ನಿರ್ದೇಶನ ಹಾಗೂ ನಿರ್ಮಾಣದ ನೂತನ ಚಿತ್ರ ‘ಗ್ಯಾಂಗ್ಸ್ ಆಫ್ ಯುಕೆ’ ಈ ವರ್ಷದ ಯುಗಾದಿ ಹಬ್ಬದ ವೇಳೆಗೆ ರಾಜ್ಯಾದ್ಯಂತ ತೆರೆ ಕಾಣಲಿದೆ. ರವಿ ಶ್ರೀವತ್ಸ ಅವರು ತಮ್ಮದೇ ಆದ ‘ಡೆಡ್ಲಿ ಆರ್ಟ್ಸ್’ ಎಂಬ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು ಆ ಮೂಲಕ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೂ ಅವಕಾಶ ನೀಡಿದ್ದಾರೆ.
ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ರವಿ ಶ್ರೀವತ್ಸ ಅವರು ಸಿನಿಮಾದ ಕಥೆ ಮಾಡಿಕೊಂಡಿದ್ದಾರೆ. ರಕ್ತ ತನ್ನ ಕುರುಹನ್ನು ಬಿಟ್ಟು ಹೋಗುತ್ತೆ, ಜಿದ್ದು ಒಬ್ಬರಿಂದ ಒಬ್ಬರಿಗೆ ಟ್ರಾವೆಲ್ ಆಗುತ್ತೆ ಅನ್ನೋ ಕಾನ್ಸೆಪ್ಟ್ ಮೇಲೆ ಈ ಚಿತ್ರಕಥೆ ಸಾಗುತ್ತದೆ. ಉತ್ತರ ಕರ್ನಾಟಕದ ಹತ್ಯಾಕಾಂಡ ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದೆ. ಚಿತ್ರರಂಗದಲ್ಲಿ ಹೆಣ್ಣುಮಕ್ಕಳಿಗೆ ಪ್ರಾಧಾನ್ಯತೆಯಿಲ್ಲ ಎನ್ನುವವರಿಗೆ ‘ಗ್ಯಾಂಗ್ಸ್ ಆಫ್ ಯುಕೆ’ ಉತ್ತರವಾಗಲಿದೆ.
ಎಂ.ಎಸ್. ರಮೇಶ್ ಜೊತೆ ಸೇರಿ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರಕಥೆ ಮಾಡಿಕೊಂಡಿರುವ ರವಿ ಶ್ರೀವತ್ಸ ಅವರು ಸಿನಿಮಾದ 56 ಜನ ಕಲಾವಿದರಲ್ಲಿ ಬಹುತೇಕ ಹೊಸಬರಿಗೇ ಅವಕಾಶ ನೀಡಿದ್ದಾರೆ. ಒರಟ ಖ್ಯಾತಿಯ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ, ಮುನಿ ಹೀಗೆ ಹೊಸಬರ ಜೊತೆ ಹಳಬರೂ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೊನೇ ಹಂತದಲ್ಲಿದ್ದು, ಶೀಘ್ರವೇ ಫಸ್ಟ್ ಕಾಪಿ ಹೊರಬರಲಿದೆ. ನಿರ್ಮಾಪಕರಾಗಿ ಎಲ್.ಎನ್. ರೆಡ್ಡಿ ಅವರು ರವಿ ಶ್ರೀವತ್ಸ ಜೊತೆ ಕೈಜೋಡಿಸಿದ್ದಾರೆ.
ಕೆವಿ. ರಾಜು ಅವರ ಪುತ್ರ ಅಮೋಘ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನು ಉಪಾಧ್ಯ, ಪ್ರವೀಣ್, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್, ಹಿರಿಯ ನಟ ಬಾಲಕೃಷ್ಣ ರೀತಿ ಕಾಣುವ ಟಂಕಸಾಲೆ ಉಮೇಶ್, ಮಹಂತೇಶ್ ಹುಲ್ಲೂರು ಸೇರಿ ಒಂದಷ್ಡು ಸ್ಥಳೀಯ ಪ್ರತಿಭೆಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಪತ್ರಕರ್ತ ನವೀನ್ ಬಂಗಾರಪ್ಪ ಭೋಸರಾಜ ಎಂಬ ರಾಜಕಾರಣಿಯಾಗಿ ನಟಿಸಿದ್ದಾರೆ. ವಿಶೇಷವಾಗಿ ಶಿಶುನಾಳ ಷರೀಫರ ಕೆಲ ಗೀತೆಗಳನ್ನು ಬಳಸಿಕೊಳ್ಳಲಾಗಿದ್ದು. ಒಟ್ಟು 9 ಹಾಡುಗಳು ಚಿತ್ರದಲ್ಲಿವೆ. ಸಾಧು ಕೋಕಿಲ್ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ.
ಇದನ್ನೂ ಓದಿ : ‘Rank Star’ ಗುರುನಂದನ್ ಬರ್ತ್ಡೇಗೆ ಹೊಸ ಚಿತ್ರದ ಶೀರ್ಷಿಕೆ ಟೀಸರ್ ಔಟ್..!