ಬೆಂಗಳೂರು : ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ತಳುಕು ಹಾಕಿಕೊಂಡಿದ್ದು, ವಿರೋಧ ಪಕ್ಷ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ಕೊಡುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಾ.ಜಿ ಪರಮೇಶ್ವರ್ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರ ಮೇಲೆ ಬಿಜೆಪಿ ಆರೋಪ ಮಾಡಿದೆ. ಇದನ್ನು ಸಿಐಡಿಗೆ ಕೊಟ್ಟಿದ್ದೇವೆ. ಇಂದು ಈ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು. ಸಚಿವರ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುತ್ತಿರುವುದು ಸರ್ಕಾರಕ್ಕೆ ಸರಿ ಬರಲ್ಲ. ಜೀವ ಕಳೆದುಕೊಂಡವರು ಬರೆದಿರುವ ಪತ್ರದಲ್ಲಿ ಸಚಿವರ ಹೆಸರು ಕೂಡ ಇಲ್ಲ. ಆದರೂ ಸಚಿವರ ಹೆಸರನ್ನು ಬಳಸಿಕೊಂಡು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರಕರಣದ ಸತ್ಯಾಸತ್ಯತೆ ಏನೆಂದು ತಿಳಿಯಲು ನಾವು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಚರ್ಚೆ ಮಾಡಿ ಪ್ರಕರಣವನ್ನು ಸಿಐಡಿಗೆ ಕೊಟ್ಟಿದ್ದೇವೆ. ಬಿಜೆಪಿ ಹೇಳಿದಂತೆ ಎಲ್ಲ ಕೇಸ್ ಅನ್ನು ತೆಗೆದುಕೊಂಡು ಹೋಗಿ ಸಿಬಿಐಗೆ ಕೊಡುವುದಕ್ಕೆ ಆಗಲ್ಲ. ಎಲ್ಲ ರಾಜಕೀಯ ಮಾಡೋಕೆ ಹೋಗಬಾರದು. ಸಿಐಡಿ ಸಮರ್ಥವಾಗಿದೆ. ಈಗಾಗಲೇ ಅನೇಕ ಕೇಸ್ಗಳು ಪರಿಹರಿಸಿದೆ. ಪ್ರಕರಣ ಸಂಬಂಧ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಇದನ್ನೂ ಓದಿ : ನ್ಯೂ ಇಯರ್ಗೆ ಗುಡ್ ನ್ಯೂಸ್ – ಜೋಗ್ ಫಾಲ್ಸ್ ವೀಕ್ಷಣೆಗೆ ಗ್ರೀನ್ ಸಿಗ್ನಲ್!