ಬೀದರ್ : ಬೀದರ್ ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಚಳಿಯ ಪ್ರಮಾಣ ತೀವ್ರ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ಮೂರು ದಿನಗಳ ಕಾಲ ಬಾರಿ ಶೀತಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿದೆ.
ಕಳೆದ ಒಂದು ವಾರದಿಂದ ಬೀದರ್ನಲ್ಲಿ ಸಂಪೂರ್ಣ ತಾಪಮಾನ ಕುಸಿದಿದೆ. ಭಾರೀ ಶೀತಗಾಳಿಯಿಂದ ಬೀದರ್ನಲ್ಲಿ ಚಳಿ ಹೆಚ್ಚುತ್ತಿದ್ದು, ಚಳಿಯಿಂದಾಗಿ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ನಸುಕಿನಲ್ಲೇ ಎದ್ದು ಗದ್ದೆಗಳಿಗೆ ಮುಖ ಮಾಡುತ್ತಿದ್ದ ರೈತರು ಸೂರ್ಯ ಬಂದ ನಂತರವೂ ಹೊಲಗಳಿಗೆ ಹೋಗುವುದಾ ಅಥವಾ ಬೇಡವೇ ಎಂದು ಯೋಚಿಸುವಂತೆ ಮಾಡಿದೆ.
ಸದ್ಯ ಬೀದರ್ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ಇದೆ. ಮುಂದಿನ 3 ದಿನಗಳಲ್ಲಿ 5-6 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. ಬೀದರ್ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ, ಜನರು 3 ದಿನಗಳ ಕಾಲ ಮನೆಯಿಂದ ಹೊರ ಬರದಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ಬೈಕ್ಗಳಲ್ಲೂ ಓಡಾಡದಂತೆ ಮುನ್ನೆಚ್ಚರಿಕೆ ನೀಡಿದ್ದು, ರಾತ್ರಿ ಹೊತ್ತು ಕೃಷಿ ಚಟುವಟಿಕೆಯಲ್ಲಿ ತೊಡಗದಂತೆ ಸೂಚನೆ ನೀಡಿದೆ.
ಇದನ್ನೂ ಓದಿ : 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರ!