ತುಮಕೂರು : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ರಾಜ್ಯ ಸರ್ಕಾರ ಸಿದ್ದಗಂಗಾ ಮಠಕ್ಕೆ ಶಾಕ್ ಕೊಟ್ಟಿದೆ. 70 ಲಕ್ಷ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪತ್ರ ಬರೆದಿದೆ.
ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70,31,438 ರೂ. ವಿದ್ಯುತ್ ಬಿಲ್‌ನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಎಡಿಬಿ ಪತ್ರದಲ್ಲಿ ಮನವಿ ಮಾಡಿದೆ. ಮಂಡಳಿಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂಬ ಕಾರಣ ನೀಡಿದೆ. ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ಪೈಪ್‌ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದೆ.
ಈ ಯೋಜನೆ ಪರಿಪೂರ್ಣವಾಗಿ ಜಾರಿಯಾದರೆ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಇಲ್ಲಿವರೆಗೆ ಪ್ರಾಯೋಗಿಕವಾಗಿ ಅಷ್ಟೇ ನೀರು ಹರಿಸಲಾಗಿದೆ. ನಾವು ಒಂದು ಹನಿ ನೀರು ಬಳಸಿಲ್ಲ ಹೀಗಾಗಿ ನಾವೇಕೆ ಬಿಲ್ ಕಟ್ಟಬೇಕು, ಇದು ಸರ್ಕಾರಿ ಯೋಜನೆ ಸರ್ಕಾರವೇ ಪಾವತಿ ಮಾಡಬೇಕೆಂದು ಮಠ ಉತ್ತರ ನೀಡಿತ್ತು. ಆದರೂ ಮೌಖಿಕವಾಗಿ ವಿದ್ಯುತ್ ಬಿಲ್ ಕಟ್ಟುವಂತೆ ಮಂಡಳಿ ಒತ್ತಡ ಹೇರಿದ್ದು, ಇದೀಗ 70 ಲಕ್ಷ ವಿದ್ಯುತ್ ಬಿಲ್ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪತ್ರದಲ್ಲೇನಿದೆ?
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ತುಮಕೂರು ತಾಲೂಕು ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಯವರೆಗೆ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಸಕ್ತ 2024ನೇ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಸದರಿ ಕೆರೆಯಿಂದ ನೀರನ್ನು ಸಿದ್ದಗಂಗಾ ಮಠದ ದೈನಂದಿನ ಕೆಲಸ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿರುತ್ತದೆ.
2023ರ ಅ.31ರಿಂದ ಹಾಗೂ 2024ರ ಮಾ.02ರವರೆಗೆ ಒಟ್ಟು 70,31,438 ರೂ. ವಿದ್ಯುತ್ ಬಿಲ್‌ಗಳನ್ವಯ ಬೆಸ್ಕಾಂಗೆ ಹಣ ಪಾವತಿಸಬೇಕಾಗಿರುತ್ತದೆ. ಪ್ರಸ್ತುತ ಮಂಡಳಿಯು ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ನೀರು ಸರಬರಾಜಿನ ವಿದ್ಯುತ್ ಬಳಕೆಯ ವೆಚ್ಚವನ್ನು ಸಿದ್ಧಗಂಗಾ ಮಠದ ವತಿಯಿಂದ ಭರಿಸುವಂತೆ ತಿಳಿಸಲು ಕೆಐಎಡಿಬಿ ನಿರ್ದೇಶಿಸಿದೆ ಎಂದು ಬರೆಯಲಾಗಿದೆ.
ಏ.6ರಂದು ಕೆಐಎಡಿಬಿಯಿಂದ ಸಿದ್ದಗಂಗಾ ಮಠಕ್ಕೆ ಪತ್ರ ಬಂದಿದೆ. ಏ.15ರಂದು ಕೆಐಎಡಿಬಿಗೆ ಸಿದ್ದಗಂಗಾ ಮಠದಿಂದ ಮರು ಪತ್ರ ರವಾನೆಯಾಗಿದೆ. ಇದೊಂದು ಸರ್ಕಾರಿ ಯೋಜನೆಯಾಗಿದ್ದರಿಂದ ಮಠದಿಂದ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಿಲ್ಲ ಎಂದು ಸಿದ್ದಗಂಗಾ ಮಠದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಿದ್ದಗಂಗಾ ಮಠದಿಂದ ಪತ್ರ ತಲುಪಿ 8 ತಿಂಗಳಾದರೂ ಕೆಐಡಿಬಿ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೆ ಅಧಿಕಾರಿಗಳು ಮೌಖಿಕವಾಗಿ ಬಿಲ್ ಕಟ್ಟುವಂತೆ ಮಠದ ಆಡಳಿತ ಮಂಡಳಿಯವರಿಗೆ ಸೂಚಿಸುತ್ತಿದ್ದಾರೆ ಎನ್ನಲಾಗಿದೆ. ನೀರಿನ ಕರ ವಿಧಿಸೋದು ಸಹಜ. ಅದರ ಬದಲಾಗಿ ಇಡೀ ಕೆರೆಗೆ ನೀರು ತುಂಬಿಸಿದ್ದರ ವಿದ್ಯುತ್ ಬಿಲ್ ನಾವೇ ಕಟ್ಟಬೇಕು ಎಂದು ಪತ್ರ ಬರೆದಿರೋದು ನಮಗೆ ಆಶ್ಚರ್ಯತಂದಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳು ಹೇಳಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಕೆಐಎಡಿಬಿ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮೀಶ್ ಹಿಂದೇಟು ಹಾಕಿದ್ದಾರೆ. ಇದು ಸರ್ಕಾರ ಹಾಗೂ ಮಂಡಳಿಯ ರಾಜ್ಯ ಘಟಕದ ನಿರ್ದೇಶನ ಎಂದು ನುಣುಚಿಕೊಂಡಿದ್ದಾರೆ. ಸಿದ್ದಗಂಗಾ ಮಠದ ಮನವಿಯನ್ನೂ ಮಂಡಳಿಯ ಗಮನಕ್ಕೆ ತಂದಿದ್ದು, ಮಂಡಳಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ಗೊತ್ತಿಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ : ಕೀರ್ತಿ ಸುರೇಶ್ ಮದುವೆಯಲ್ಲಿ ದಳಪತಿ ವಿಜಯ್ – ಫೋಟೋ ಹಂಚಿಕೊಂಡ ನಟಿ ಹೇಳಿದ್ದೇನು?