ತಿರುಪತಿ : ಹಿಂದೂಯೇತರ ನೌಕರರ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿ ಕೊನೆಗೂ ಕ್ರಮ ತೆಗೆದುಕೊಂಡಿದೆ.
ಕರ್ತವ್ಯದಲ್ಲಿದ್ದಾಗ ಹಿಂದೂ ಧರ್ಮದ ಆಚರಣೆ, ಸಂಪ್ರದಾಯಗಳನ್ನು ಪಾಲನೆ ಮಾಡದ 18 ಹಿಂದೂಯೇತರ ನೌಕರರಿಗೆ ಇತರೆ ಇಲಾಖೆಗಳಿಗೆ ವರ್ಗವಣೆಯಾಗಿ, ಇಲ್ಲವಾದರೆ ಸ್ವಯಂ ನಿವೃತ್ತಿ ತೆಗೆದುಕೊಳ್ಳಿ ಎಂದು TTD ಸೂಚಿಸಿದೆ. ಹಾಗೆಯೇ ಈ ಆದೇಶವನ್ನು ಪಾಲಿಸಲು ವಿಫಲವಾದರೆ ಮುಂದಿನ ಕ್ರಮ ಕೈಗೊಳ್ಳಬೇಕಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಈ 18 ಸಿಬ್ಬಂದಿ ಟಿಟಿಡಿ ಉತ್ಸವಗಳು ಮತ್ತು ಆಚರಣೆಗಳಲ್ಲಿ ಭಾಗವಹಿಸಿದ್ದರೂ ಹಿಂದೂ ಧರ್ಮದ ಆಚರಣೆಗಳನ್ನು ಪಾಲನೆ ಮಾಡದ್ದಕ್ಕೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ದೇವಾಲಯಗಳು ಮತ್ತು ಧಾರ್ಮಿಕತೆಯ ಆಧ್ಯಾತ್ಮಿಕ ಪಾವಿತ್ರ್ಯವನ್ನು ಕಾಪಾಡಲು ಈ ನಿರ್ಧಾರ ಕೈಗೊಳ್ಳಾಗಿದೆ ಎಂದು ಟಿಟಿಡಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಹಲವು ವರ್ಷಗಳಿಂದ ದೇವಸ್ಥಾನ ಮಂಡಳಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂದು ಟಿಟಿಡಿ ಕಾಯ್ದೆಯನ್ನು ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ. 1989 ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶವು ಟಿಟಿಡಿ-ಆಡಳಿತದ ಹುದ್ದೆಗಳಿಗೆ ನೇಮಕಾತಿಗಳನ್ನು ಹಿಂದೂಗಳಿಗೆ ಸೀಮಿತಗೊಳಿಸಬೇಕೆಂದು ಆದೇಶಿಸಿತ್ತು.
ಇನ್ನು ಆಂಧ್ರಪ್ರದೇಶದಲ್ಲಿ ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿಕೂಟದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಟಿಟಿಡಿ ಆಡಳಿತ ಮಂಡಳಿಯನ್ನು ಪುನಾರಚಿಸಲಾಗಿತ್ತು. ಅನಂತರ ನಡೆದ ಮಂಡಳಿಯ ಮೊದಲ ಸಭೆಯಲ್ಲಿ ಟಿಟಿಡಿಯಲ್ಲಿ ಹಿಂದೂ ಉದ್ಯೋಗಿಗಳು ಮಾತ್ರ ಇರಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಒಟ್ಟು 7 ಸಾವಿರ ಮಂದಿ ಉದ್ಯೋಗಿಗಳು ಟಿಟಿಡಿಯಲ್ಲಿದ್ದು, ಈ ಪೈಕಿ 300 ಮಂದಿ ಹಿಂದೂಯೇತರರು ಇದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : http://ಇಂದಿನಿಂದ ಭಾರತ-ಇಂಗ್ಲೆಂಡ್ ಏಕದಿನ ಸರಣಿ.. ಪಂದ್ಯ ಎಷ್ಟು ಗಂಟೆಗೆ ಶುರು? ಲೈವ್ ವೀಕ್ಷಿಸುವುದೇಗೆ? ಇಲ್ಲಿದೆ ಮಾಹಿತಿ









