ಬಿಟ್‌ಕಾಯಿನ್ ಹಗರಣ – ಮೊಹಮ್ಮದ್ ನಲಪಾಡ್ ವಿರುದ್ಧ SIT ಚಾರ್ಜ್‌ಶೀಟ್ ಸಲ್ಲಿಕೆ!

ಬೆಂಗಳೂರು : ಬಿಟ್ ಕಾಯಿನ್ ಹಗರಣದಲ್ಲಿ ಮೊಹಮ್ಮದ್ ನಲಪಾಡ್​ಗೆ ಮತ್ತೆ ಶಾಕ್ ಎದುರಾಗಿದ್ದು, ಈ ಪ್ರಕರಣ ಸಂಬಂಧ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಿದ್ದ ಎಸ್ಐಟಿ ಶ್ರೀಕಿ, ರಾಬಿನ್ ಖಂಡೇವಾಲ, ಮೊಹಮ್ಮದ್ ನಲಪಾಡ್ ಸೇರಿ ಇತರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಚಾರ್ಜ್‌ಶೀಟ್‌ನಲ್ಲಿ ಮೊಹಮ್ಮದ್ ನಲಪಾಡ್ ಅವರಿಗೆ ಹಣ ಸಂದಾಯವಾಗಿರುವ ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ಬಿಟ್ ಕಾಯಿನ್ ನಗದೀಕರಣಕ್ಕೆ ಶ್ರೀಕಿ ನಲಪಾಡ್ ಸಂಪರ್ಕ ಮಾಡಿದ್ದ. ನಲಪಾಡ್ ತಮ್ಮ ಮುಂಬೈ ಮೂಲದ ಸ್ನೇಹಿತರ ಮೂಲಕ ಈ ಬಿಟ್‌ಕಾಯಿನ್ ಹಣವನ್ನು ಹವಾಲಾ ರೂಪದಲ್ಲಿ ನಗದೀಕರಣ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಇಡೀ ಪ್ರಕ್ರಿಯೆಯ ಡೀಲ್‌ನಲ್ಲಿ ಬಂದ ಕಮಿಷನ್ ಹಣದಲ್ಲಿ ಮೊಹಮ್ಮದ್ ನಲಪಾಡ್ ಅವರಿಗೂ ಪಾಲು ಹೋಗಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಇದನ್ನು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ.

ಇತ್ತೀಚೆಗಷ್ಟೇ ಇ.ಡಿ ಅಧಿಕಾರಿಗಳು ಮೊಹಮ್ಮದ್ ನಲಪಾಡ್ ಹಾಗೂ ಶ್ರೀಕಿ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕಿ, ಸುಖೇಶ್ ಹೆಗ್ಡೆ ಮತ್ತು ರಾಬಿನ್ ಖಂಡೇವಾಲ ಅವರನ್ನು ಬಂಧಿಸಿ, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇಡಿ ಅಧಿಕಾರಿಗಳು ನಲಪಾಡ್​ಗೆ ಎರಡು ಬಾರಿ ನೊಟೀಸ್ ನೀಡಿದ್ದರು. ಈಗ ಮೂರನೇ ನೊಟೀಸ್​ಗೆ ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ : ವಿಶಾಖಪಟ್ಟಣದ ಉಕ್ಕು ಸ್ಥಾವರದಲ್ಲಿ ಭೀಕರ ದುರಂತ – 8 ಕಾರ್ಮಿಕರು ಸಾವು!

Btv Kannada
Author: Btv Kannada

Leave a Comment

Read More