ಬೆಂಗಳೂರು : ಬೆಂಗಳೂರಿನ ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಕುರಿತು ಸುದ್ದಿಗೋಷ್ಠಿ ನಡೆಸಲು ಮುಂದಾದ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ನ್ನು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಸದ ಡಾ ಕೆ ಸುಧಾಕರ್ ಸಂಗಡಿಗರು ಮತ್ತು ಯಲಂಕ ಶಾಸಕ ಎಸ್ ಆರ್ ವಿಶ್ವನಾಥ್ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ. ಎರಡೂ ಬಣಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಸಂಸದ ಡಾ. ಕೆ. ಸುಧಾಕರ್ ಸುದ್ದಿಗೋಷ್ಠಿ ವೇಳೆ ವಿಶ್ವನಾಥ್ ಬೆಂಬಲಿಗರು ಮಧ್ಯಪ್ರವೇಶಿಸಿ ಸುಧಾಕರ್ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವರನ್ನು ಹೊರಗಿಟ್ಟು ತಮ್ಮದೇ ಸಂಗಡಿಗರನ್ನು ಕರೆದುಕೊಂಡು ಪತ್ರಿಕಾಗೋಷ್ಠಿ ನಡೆಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಕೆಲ ಕಾಲ ಸಂಸದರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದು, ಈ ವೇಳೆ ಡಾ ಕೆ ಸುಧಾಕರ್ ಮತ್ತು ಎಸ್ ಆರ್ ವಿಶ್ವನಾಥ್ ಕಾರ್ಯಕರ್ತರ ನಡುವೆ ಬಿಗ್ ಫೈಟ್ ನಡೆದಿದೆ.
ಎರಡೂ ಬಣಗಳ ವಾಗ್ವಾದದಿಂದ ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಯಲಹಂಕ ಪೋಲೀಸರು ಸ್ಥಳಕ್ಕೆ ಆಗಮಿಸಿ ಕಾರ್ಯಕರ್ತರನ್ನು ಸಮಾಧಾನಗೊಳಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ಸಮಯದಿಂದಲೇ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಸಕ ವಿಶ್ವನಾಥ್ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ತೀವ್ರ ಪ್ರಯತ್ನ ನಡೆಸಿದ್ದರು. ಆದರೆ ಅಂತಿಮವಾಗಿ ಸುಧಾಕರ್ ಟಿಕೆಟ್ ಗಿಟ್ಟಿಸಿಕೊಂಡು ಸಂಸದರಾಗಿ ಆಯ್ಕೆಯಾದರು. ಅಂದಿನಿಂದ ವಿಶ್ವನಾಥ್ ಅವರು ಸುಧಾಕರ್ ವಿರುದ್ಧ ಮುನಿಸಿಕೊಂಡಿದ್ದರು.
ಇದನ್ನೂ ಓದಿ : ನಾಳೆ ಸಿಎಂ ಪದಗ್ರಹಣ – ಬೆಂಗಳೂರಿನ ಈ ರಸ್ತೆಗಳ ಸಂಚಾರದಲ್ಲಿ ಬದಲಾವಣೆ!









