ಒಕ್ಕಲಿಗರ ಸಂಘದಲ್ಲಿ ಭಾರೀ ಅಕ್ರಮ – ಕೂಡಲೇ ವಿಸರ್ಜಿಸಲು ಜಂಟಿ ರಿಜಿಸ್ಟರ್​ಗೆ ಸಾವಿರಾರು ಸದಸ್ಯರ ದೂರು!

ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಸಮುದಾಯ ಸಂಸ್ಥೆಗಳಲ್ಲಿ ಒಂದಾದ ರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಗಾಗಿ ಪ್ರಸ್ತುತ ಇರುವ ಕಾರ್ಯಕಾರಿ ಸಮಿತಿಯನ್ನು ಕೂಡಲೇ ವಿಸರ್ಜಿಸಬೇಕು ಎಂದು ಜಂಟಿ ರಿಜಿಸ್ಟರ್ ವೆಂಕಟೇಶ್ ಅವರಿಗೆ ಸಾವಿರಾರು ಸದಸ್ಯರು ದೂರು ನೀಡಿದ್ದಾರೆ.

ಸಂಘದ ಹಿರಿಯ ಸದಸ್ಯರೊಬ್ಬರು ಸಭೆಯಲ್ಲಿ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯು ಸಮುದಾಯದ ಆಸ್ತಿಯನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ, ಕೇವಲ ಸ್ವಾರ್ಥ ಸಾಧನೆಗೆ ಇಳಿದಿದೆ ಎಂದು ಕಿಡಿಕಾರಿದ್ದಾರೆ.

ಯಶವಂತಪುರ ಹೋಬಳಿಯ ಸಜ್ಜೇಪಾಳ್ಯದಲ್ಲಿರುವ ಸಂಘದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿನ ವಿಷಯದ ಬಗ್ಗೆ ಪ್ರಸ್ತುತ ಸಮಿತಿಯು ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಜಮೀನು ರಕ್ಷಣೆಗಾಗಿ ಸದಸ್ಯರು ಬರೋಬ್ಬರಿ 90 ದಿನಗಳ ಕಾಲ ನಿರಂತರ ಹೋರಾಟ ಮಾಡಿದ್ದರು. ಆದರೆ ಪ್ರಸ್ತುತ ಸಮಿತಿಯು ಸರ್ಕಾರದ ಮಟ್ಟದಲ್ಲಿ ಯಾವುದೇ ವ್ಯವಹಾರ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಸಂಘದ ನಿಯಮಾವಳಿಗಳ ಪ್ರಕಾರ ಪ್ರತಿಯೊಬ್ಬ ಸದಸ್ಯರಿಗೂ ಸಭೆಯ ನೋಟಿಸ್ ತಲುಪಿಸಬೇಕು. ಆದರೆ ಪ್ರಸ್ತುತ ಸಮಿತಿಯು ಯಾವುದೇ ಸದಸ್ಯರಿಗೆ ವೈಯಕ್ತಿಕ ಪತ್ರ, ಎಸ್ಎಮ್ಎಸ್, ವಾಟ್ಸಪ್ ಅಥವಾ ಇಮೇಲ್ ಮೂಲಕ ಮಾಹಿತಿ ನೀಡಿಲ್ಲ. ಕೇವಲ ಕೆಲವು ಪತ್ರಿಕೆಗಳಲ್ಲಿ ಸಣ್ಣದಾಗಿ ಜಾಹೀರಾತು ನೀಡಿ, ಗುಟ್ಟಾಗಿ ಸಭೆ ಮುಗಿಸಲು ಸಂಚು ರೂಪಿಸಲಾಗಿತ್ತು. ಕೇವಲ 3,000 ಸದಸ್ಯರು ಬಂದರೆ ಕನಿಷ್ಠ ಹಾಜರಾತಿ ಸಿಗುತ್ತದೆ ಎಂಬ ಕುತಂತ್ರದಿಂದ ಈ ರೀತಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಬೃಹತ್ ಹಗರಣದ ಮೂಲಕ ಅಧಿಕಾರ ಹಿಡಿದಿರುವ ಭ್ರಷ್ಟರು, ಸಭೆಯಲ್ಲಿ ತಮ್ಮನ್ನು ಹೊಗಳುವ ಭಟ್ಟಂಗಿಗಳಿಗೆ ಮಾತ್ರ ಮಾತನಾಡಲು ಅವಕಾಶ ನೀಡಿದ್ದಾರೆ. ಸಮುದಾಯದ ಹಿತದೃಷ್ಟಿಯಿಂದ ಪ್ರಶ್ನೆ ಕೇಳಲು ಹೋದ ನಿಷ್ಠಾವಂತ ಸದಸ್ಯರ ಮೇಲೆ ಆಡಳಿತ ಮಂಡಳಿಯ ಚೇಲಾಗಳು ಗಲಾಟೆ ಮಾಡಿ ಸತ್ಯ ಚರ್ಚೆಯಾಗದಂತೆ ತಡೆದಿದ್ದಾರೆ.

ಪ್ರತಿ ನಿರ್ದೇಶಕರಿಗೆ ತಲಾ 12 ಲಕ್ಷ ರೂ. ಲಂಚ ನೀಡಿ ಅಧ್ಯಕ್ಷರಾಗಿರುವ ಈ ಭ್ರಷ್ಟ ಸಮಿತಿಯನ್ನು ಕೂಡಲೇ ವಿಸರ್ಜಿಸಬೇಕು. ಸಂಘದ ಆಡಳಿತವನ್ನು ಮುನ್ನಡೆಸಲು ಮತ್ತು ಹಳೇ ಭ್ರಷ್ಟಾಚಾರದ ತನಿಖೆ ನಡೆಸಲು ತಕ್ಷಣವೇ ಸರ್ಕಾರಿ ಕಾರ್ಯಾಧಿಕಾರಿಯನ್ನು ನೇಮಿಸಬೇಕು. ಸಮುದಾಯದ ಪ್ರಗತಿಪರ ಕೆಲಸಗಳು ಸಾಗಲು ಮತ್ತು ಸಂಘವನ್ನು ಸರಿ ತರಲು ಶೀಘ್ರದಲ್ಲೇ ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂದು ಸಾವಿರಾರು ಸದಸ್ಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಇಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣ – ಮಧ್ಯಾಹ್ನದೊಳಗೆ ಸಚಿವರ ಮೊದಲ ಪಟ್ಟಿ ಫೈನಲ್?

Btv Kannada
Author: Btv Kannada

Leave a Comment

Read More

Read More