ಬೆಂಗಳೂರು : ನನಗೆ ಸುಗಂಧರಾಜ ಹೂವಿನ ಅಲರ್ಜಿ ಇರುವುದರಿಂದ ನನ್ನ ಭೇಟಿ ವೇಳೆ ಆ ಹೂವಿನ ಹಾರ ನಿಷೇಧಿಸಲಾಗಿದೆ. ಯಾರೂ ಸುಗಂಧರಾಜ ಹೂವಿನ ಹಾರ ತರಬಾರದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಕಾರ್ಯಕರ್ತರ ಉತ್ಸಾಹ ನನಗೆ ಅರ್ಥವಾಗುತ್ತದೆ. ಪ್ರಮಾಣ ವಚನ ಕಾರ್ಯಕ್ರಮವನ್ನು ಸರಳವಾಗಿ ಮಾಡುತ್ತಿರುವುದರಿಂದ ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸಲು ಆಗುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಸಿಎಂ ಆಗುತ್ತಿರುವುದು ನಾನಲ್ಲ, ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ. 1979 ರಿಂದ ನಾನು ಪಕ್ಷದಲ್ಲಿ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಸಂಭ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಯತೀಂದ್ರ ಸಿದ್ದರಾಮಯ್ಯ ಅವರು ನನ್ನ ಸಹೋದ್ಯೋಗಿ. ಪಕ್ಷದಲ್ಲಿ ಈ ಹಿಂದೆಯೂ ಅವರೊಟ್ಟಿಗೆ ಕೆಲಸ ಮಾಡಿರುವೆ, ಮುಂದೆಯೂ ಕೆಲಸ ಮಾಡುವೆ ಎಂದರು.
ಆರ್ ಸಿಬಿ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ರಾಜಕೀಯ ಕಾರಣಕ್ಕೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ಈ ಬಗ್ಗೆ ಈಗ ಹೆಚ್ಚು ಮಾತನಾಡುವುದಿಲ್ಲ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಆರ್ ಸಿಬಿ ಈ ವರ್ಷವೂ ಚೆನ್ನಾಗಿ ಆಡುತ್ತಿದೆ. ರಾಜ್ಯದ ಜನರ ಪರವಾಗಿ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ಇದನ್ನೂ ಓದಿ : ಸಚಿವರ ಪ್ರಮಾಣ ವಚನ ಹೈಕಮಾಂಡ್ ತೀರ್ಮಾನ – ಸಿಎಲ್ಪಿ ನಾಯಕ ಡಿ.ಕೆ ಶಿವಕುಮಾರ್!








